ರಾಜ್ಯ

ದಕ್ಷಿಣ ಆಫ್ರಿಕಾದ ಓರ್ವ ಪ್ರಯಾಣಿಕನಲ್ಲಿ ಡೆಲ್ಟಾಗಿಂತ ಭಿನ್ನವಾದ ವೈರಸ್​ ಪತ್ತೆ: ಆರೋಗ್ಯ ಸಚಿವ ಸುಧಾಕರ್

Manjula VN

ಬೆಂಗಳೂರು: ಸೋಂಕು ಪೀಡಿತ ದಕ್ಷಿಣ ಆಫ್ರಿಕಾದ ಇಬ್ಬರು ಪ್ರಯಾಣಿಕರ ಪೈಕಿ ಓರ್ವ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನವಾದ ವೈರಸ್​ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವ್ಯಕ್ತಿಯ ಮಾದರಿಯನ್ನು ಕೇಂದ್ರ ಸರ್ಕಾರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಂತಿಮ ಮಾಹಿತಿಗಾಗಿ ಕಾಯಲಾಗುತ್ತಿದೆ. ಹೊಸ ರೂಪಾಂತರಿತ ವೈರಸ್ ಹರಡುವುದನ್ನು ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ನನಗೆ ತಿಳಿದಿರುವ ಮಾಹಿತಿ ಪ್ರಕಾರ ಓಮಿಕ್ರಾನ್‌ ಸೋಂಕು ಇದು ಬಹಳ ವೇಗವಾಗಿ ಹರಡುತ್ತಿದೆ. ಪ್ರತೀನಿತ್ಯ ಭಾರತಕ್ಕೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗದ ಕುರಿತು ಆತಂಕ ಎದುರಾಗಿದೆ. ನಮ್ಮದು ದೊಡ್ಡ ರಾಷ್ಟವಾಗಿರುವ ಹಿನ್ನೆಲೆಯಲ್ಲಿ ಜನರ ಒಳಹರಿವನ್ನು ತಡೆಯುವುದು ಕಷ್ಟಸಾಧ್ಯ. ಇದೀಗ ರಾಜ್ಯ ಸರ್ಕಾರ ಈ ಹಿಂದಿನ 5 ಟಿ ಸೂತ್ರ (ಟೆಸ್ಟ್, ಟ್ರೇಸ್, ಟ್ರ್ಯಾಕ್, ಟ್ರೀಟ್ ಹಾಗೂ ಟೆಕ್ನಾಲಜಿ)ಗಳನ್ನು ಅನುಸರಿಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

ಈಗಲೇ ಇದನ್ನು ಕೊರೋನಾ ಮೂರನೇ ಅಲೆ ಎಂದು ಕರೆಯಲು ಸಾಧ್ಯವಿಲ್ಲ. ಕಳೆದ 9 ತಿಂಗಳುಗಳಿಂದ ಕಾಡಿದ್ದ ಡೆಲ್ಟಾ ರೂಪಾಂತರಿ ವೈರಸ್'ನ್ನು ಓಮಿಕ್ರಾನ್ ಹಿಂದಿಕ್ಕಿದೆ. ವಿದೇಶಿಗರು ಆಗಮಿಸುವ ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲಿರಿಸುವುದು ಮುಖ್ಯವಾಗಿದೆ. ಈಗಾಗಲೇ ಅದನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ: ಓಮಿಕ್ರಾನ್ ವೈರಾಣುವಿನ ರೋಗಲಕ್ಷಣಗಳೇನು, ತೀವ್ರತೆ ಎಷ್ಟು?: ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದು ಹೀಗೆ...

ಅಪಾಯಕಾರಿಯಾಗಿರುವ 10-12 ರಾಷ್ಟ್ರಗಳಿಂದ ಭಾರತಕ್ಕೆ ಆಗಮನಿಸುತ್ತಿರುವ ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದ್ದೇ ಆದರೆ, ಸೋಂಕು ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಇದರ ಜೊತೆಗೆ 15 ಹಿಂದೆ ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಆಗಮಿಸಿರುವ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದ್ದು, ಇಂತಹ ಪ್ರಯಾಣಿಕರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೂ ನಿಗಾ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT