ರಾಜ್ಯ

ಮುಂದಿನ 2-3 ದಿನಗಳಲ್ಲಿ ಎಲ್ಲಾ ವೈದ್ಯರಿಗೂ ರಿಸ್ಕ್ ಭತ್ಯೆ ಪಾವತಿ: ಸಚಿವ ಡಾ. ಕೆ.ಸುಧಾಕರ್

Nagaraja AB

ಬೆಂಗಳೂರು: ಮುಂದಿನ ಎರಡು-ಮೂರು ದಿನಗಳಲ್ಲಿ ಎಲ್ಲಾ ವೈದ್ಯರಿಗೂ ರಿಸ್ಕ್ ಭತ್ಯೆ ಪಾವತಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಕೋವಿಡ್ ರಿಸ್ಕ್ ಭತ್ಯೆ ಪಾವತಿ ವಿಳಂಬದ ಕುರಿತು ವಿಕ್ಟೋರಿಯಾ ಆಸ್ಪತ್ರೆ ಬಳಿ ನಡೆದ ಪ್ರತಿಭಟನೆ ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮೆಡಿಕಲ್ ಕಾಲೇಜುಗಳಿಗೆ ರಿಸ್ಕ್ ಭತ್ಯೆಯ ಒಟ್ಟು 73 ಕೋಟಿ ರೂಪಾಯಿ ಮೊತ್ತದ ಮಂಜೂರು ಪ್ರಕ್ರಿಯೆಗಳು ಇಂದು ಪೂರ್ಣಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಎರಡು ಮೂರು ದಿನಗಳಲ್ಲಿ ರಿಸ್ಕ್ ಭತ್ಯೆಯನ್ನು ಎಲ್ಲಾ ವೈದ್ಯರಿಗೂ ಪಾವತಿಸಲಾಗುವುದು, ಆದ್ದರಿಂದ ಈ ಸಂದರ್ಭದಲ್ಲಿ ಪ್ರತಿಭಟನೆ ಹಿಂಪಡೆದು ಕರ್ತವ್ಯಕ್ಕೆ ಮರಳಬೇಕು ಎಂದು ಟ್ವೀಟ್ ನಲ್ಲಿ ಕೋರಿದ್ದಾರೆ. 

ಹೊಸ ಕೋವಿಡ್ ತಳಿ ಜನತೆಯಲ್ಲಿ ತಲ್ಲಣ ಮೂಡಿಸಿರುವಾಗಲೇ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ಹೊರ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರಕದೆ ಪರದಾಡುವಂತಾಯಿತು. ಸರ್ಕಾರ ಕೊಟ್ಟ ಮಾತಿನಂತೆ ಕೋವಿಡ್ ಪರಿಹಾರ ಭತ್ಯೆಯನ್ನು ನಿಗದಿತ ಅವಧಿಯಲ್ಲಿ ಪಾವತಿ ಮಾಡುತ್ತಿಲ್ಲ ಎಂದು ವೈದ್ಯರು ದೂರಿದ್ದಾರೆ.

SCROLL FOR NEXT