ರಾಜ್ಯ

ಹೊಸ ಸಂಸತ್ ಭವನಕ್ಕೆ `ಅನುಭವ ಮಂಟಪ 'ಎಂದು ಹೆಸರಿಡಿ: ಕೇಂದ್ರಕ್ಕೆ ಲಿಂಗಾಯತ ಶ್ರೀಗಳ ಆಗ್ರಹ

Lingaraj Badiger

ಬೆಳಗಾವಿ: ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಭವನಕ್ಕೆ `ಅನುಭವ ಮಂಟಪ 'ಎಂದು ಹೆಸರಿಡುವಂತೆ ಶುಕ್ರವಾರ ರಾಜ್ಯದ ಹಲವು ಲಿಂಗಾಯತ ಶ್ರೀಗಳು ಒತ್ತಾಯಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಸಭೆ ಸೇರಿದ ಹಲವು ಪ್ರಸಿದ್ಧ ಲಿಂಗಾಯತ ಸ್ವಾಮಿಗಳು, ನವೀಕರಿಸಿದ ಬೆಳಗಾವಿ ರೈಲು ನಿಲ್ದಾಣಕ್ಕೆ ನಾಗನೂರು ಮಠದ ಶಿವಬಸವ ಸ್ವಾಮೀಜಿ ಎಂದು ಹೆಸರಿಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮಠದ ಭಕ್ತರ ಇಚ್ಛೆಯಂತೆ ಸಂಸತ್ ಭವನಕ್ಕೆ ಅನುಭವ ಮಂಟಪದ ಹೆಸರಿಡಲು ತಾವು ಬೇಡಿಕೆ ಇಟ್ಟಿದ್ದೇವೆ. ತಮ್ಮ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರ ಅದನ್ನು ಶಿಫಾರಸು ಮಾಡಬೇಕು ಎಂದು ಹೇಳಿದರು.

ನಾಗನೂರು ಮಠದ ಶಿವಬಸವ ಸ್ವಾಮೀಜಿಯವರ ಕೆಲಸಗಳನ್ನು ನೆನಪಿಸಿಕೊಂಡ ಗದಗ-ಡಂಬಳ ತೊಂಡತಾರ್ಯ ಮಠದ ಸಿದ್ದರಾಮ ಸ್ವಾಮಿಗಳು,  1932 ರಲ್ಲಿ ಬೆಳಗಾವಿಗೆ ಆಗಮಿಸಿದ ಶಿವಬಸವ ಸ್ವಾಮಿಗಳು ಬಡ ಮಕ್ಕಳಿಗೆ ಶಿಕ್ಷಣ, ಆಹಾರ ಮತ್ತು ಆಶ್ರಯ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಶಿವಬಸವ ಸ್ವಾಮೀಜಿಯವರ ಕೊಡುಗೆ ಅಪಾರ. ಹೀಗಾಗಿ ಬೆಳಗಾವಿ ರೈಲ್ವೇ ನಿಲ್ದಾಣಕ್ಕೆ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

ವಿವಿಧ ಲಿಂಗಾಯತ ಮಠಗಳ ಅನೇಕ ಸ್ವಾಮಿಗಳು ಈ ಸಂದರ್ಭದಲ್ಲಿ ಮಾತನಾಡಿದರು ಮತ್ತು ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಭವನಕ್ಕೆ `ಅನುಭವ ಮಂಟಪ 'ಎಂದು ಹೆಸರಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಸ್ವಾಮೀಜಿಗಳ ನಿಯೋಗ ಕರೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದರು.

ಲಿಂಗಾಯತ ಶ್ರೀಗಳು ಹಾಗೂ ಸ್ಥಳೀಯ ಮುಖಂಡರು ಅಶೋಕ್ ಚಂದರಗಿ ಅವರ ನೇತೃತ್ವದಲ್ಲಿ ಹೊಸ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡುವಂತೆ ಪ್ರಧಾನಿ ಮೋದಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

SCROLL FOR NEXT