ರಾಜ್ಯ

ಶಿಷ್ಟಾಚಾರಗಳ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳೇ ಇಲ್ಲ

Srinivasamurthy VN

ಬೆಂಗಳೂರು: ಅಧ್ಯಯನಗಳ ಸಂಬಂಧ ವಿಧಾನ ಮಂಡಲ ಸಮಿತಿಗಳು ಭೇಟಿ ನೀಡಿದಾಗ ಅಧಿಕಾರಿಗಳು ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳೇ ಇಲ್ಲದಿರುವುದು ಬೆಳಕಿಗೆ ಬಂದಿದೆ.

ವಿಧಾನಸಭೆಯ ಹಕ್ಕುಬಾಧ್ಯತೆಗಳ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಈ ಸಂಬಂಧ ಸೂಕ್ತ ಮಾರ್ಗಸೂಚಿಗಳನ್ನು ರಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ವಿಧಾನ ಮಂಡಲದ ಸಮಿತಿ ಸದಸ್ಯರನ್ನು ಸ್ವಾಗತಿಸುವಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂಬ ದೂರು ಹಕ್ಕುಬಾಧ್ಯತೆ ಸಮಿತಿ ಮುಂದೆ ವಿಚಾರಣೆಗೆ ಬಂದಿತ್ತು.

ಈ ಕುರಿತು ಹಕ್ಕುಬಾಧ್ಯತಾ ಸಮಿತಿ ವಿವರವಾದ ವಿಚಾರಣೆ ನಡೆಸಿದಾಗ ವಿಧಾನ ಮಂಡಲದ ಸಮಿತಿಗಳು ಭೇಟಿ ನೀಡಿದ ಸಂದರ್ಭ ಸರ್ಕಾರದ ಯಾವ ಹಂತದ ಅಧಿಕಾರಿಗಳು ಸ್ವಾಗತಿಸಬೇಕು, ಆ ವೇಳೆ ಕೈಗೊಳ್ಳಬೇಕಾದ ಶಿಷ್ಟಾಚಾರಗಳೇನು ಎಂಬುದರ ಬಗ್ಗೆ ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾದ ವಿವರ ನಮೂದಾಗಿಲ್ಲ. ಈ ಬಗ್ಗೆ ಪರಿಶೀಲಿಸಿ, ಸ್ಪಷ್ಟ ಮಾರ್ಗಸೂಚಿಗಳನ್ನು ಕೂಡಲೇ ಹೊರಡಿಸುವಂತೆ ಸಮಿತಿ ಶಿಫಾರಸು ಮಾಡಿರುತ್ತದೆ ಎಂದು ಸಮಿತಿ ಅಧ‍್ಯಕ್ಷ ಯತ್ನಾಳ್ ಅವರು ಹೇಳಿದ್ದಾರೆ.

ಶಿಷ್ಟಾಚಾರ ಉಲ್ಲಂಘಟನೆ ಆರೋಪದ ಸಂಬಂಧ ಹಕ್ಕುಬಾಧ್ಯತಾ ಸಮಿತಿ ಮುಂದೆ ದಿನಾಂಕ: 21.04,2021ರಂದು ವಿಚಾರಣೆಗಾಗಿ ಹಾಜರಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಹೇಳಿಕೆ ದಾಖಲಿಸಿದ್ದಾರೆ. 

“ಯಾವುದೇ ಸಮಿತಿಗಾಗಲಿ, ಶಾಸಕರಿಗಾಗಲಿ ಅಗೌರವ ತೋರುವ ಉದ್ದೇಶವಿಲ್ಲ. ಎಲ್ಲರೊಂದಿಗೂ ಗೌರವದಿಂದ ನಡೆದುಕೊಂಡು ಹೋಗುತ್ತೇನೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಯಮದಂತೆ ಶಿಷ್ಟಾಚಾರ ಪಾಲಿಸುತ್ತೇನೆ. ಆದರೆ ಸಕ್ಕರೆ ಕಾರ್ಖಾನೆಯ ಬಗ್ಗೆ ಯಾವ ಮಾಹಿತಿಯೂ ಜಿಲ್ಲಾಧಿಕಾರಿಗಳ ಬಳಿ ಇಲ್ಗ. ಆದಾಗ್ಯೂ ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇನೆ” ಎಂದು ಹೇಳಿದ್ದಾರೆ. 

ಈ ಮನವಿಯನ್ನು ಪರಿಗಣಿಸಿ ಸದರಿ ಪ್ರಕರಣವನ್ನು ಮುಕ್ತಾಯಗೊಳಿಸಲು ಶಿಫಾರಸು ಮಾಡಿರುತ್ತದೆ ಎಂದು ಸಮಿತಿ ಅಧ್ಯಕ್ಷರು ಹೇಳಿದ್ದಾರೆ.

SCROLL FOR NEXT