ರಾಜ್ಯ

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ದಸರಾ ರಜೆ ಬಳಿಕ 1ನೇ ತರಗತಿಯಿಂದ ಶಾಲೆ ಆರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

Sumana Upadhyaya

ಬೆಂಗಳೂರು: ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ದಸರಾ ಹಬ್ಬ ರಜೆ ಬಳಿಕ 1ರಿಂದ 5ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದ್ಯ 6ರಿಂದ ತರಗತಿಗಳನ್ನು ಆರಂಭಿಸಲಾಗಿದೆ. ಕೋವಿಡ್-2ನೇ ಅಲೆ ತಗ್ಗಿರುವುದರಿಂದ 1ರಿಂದ ತರಗತಿ ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ಕೊಟ್ಟರೆ ಆರಂಭಿಸುತ್ತೇವೆ. ಇಲ್ಲದಿದ್ದರೆ 3ನೇ ತರಗತಿಯಿಂದ ಆರಂಭಿಸುವ ಬಗ್ಗೆ ಅವಕಾಶಗಳಿವೆಯೇ ಎಂದು ನೋಡುತ್ತೇವೆ ಎಂದರು.

ಸದ್ಯದಲ್ಲಿಯೇ ಶಿಕ್ಷಣ ಇಲಾಖೆ ಅಧಿಕಾರಿಗಳು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಜೊತೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ದಸರಾ ರಜೆ ಬಳಿಕ 1ನೇ ತರಗತಿ ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಪುನರಾರಂಭಿಸುವ ಕುರಿತು ಮಾತನಾಡಿದ ಸಚಿವರು, ಅಕ್ಟೋಬರ್ 20 ರ ತನಕ ಶಾಲೆಗಳಿಗೆ ದಸರಾ ರಜೆಯಿದೆ. ಆದ್ದರಿಂದ ಅಕ್ಟೋಬರ್ 21 ರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಗೊಳ್ಳಲಿದೆ ಎಂದರು.

ಶಾಲಾ ಶುಲ್ಕ ವಿಚಾರವಾಗಿ ಮಾತನಾಡಿದ ಸಚಿವರು ಬೇರೆ ರಾಜ್ಯಗಳಲ್ಲಿ ಶುಲ್ಕ ತಡೆ ಬಗ್ಗೆ ಪರಿಶೀಲಿಸುವ, ನಿರ್ಧಾರ ಕೈಗೊಳ್ಳುವ ಸಮಿತಿಗಳಿವೆ. ಅಂಥವೇ ಸಮಿತಿಗಳನ್ನು ರಾಜ್ಯದಲ್ಲಿಯೂ ರಚಿಸುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ. ಬೇರೆ ರಾಜ್ಯಗಳ ಶುಲ್ಕ ಮಾದರಿ ಅಧ್ಯಯನ ಮಾಡಿದ ಬಳಿಕ ಅದರ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

SCROLL FOR NEXT