ರಾಜ್ಯ

ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಪ್ರಕರಣಗಳ ಹೆಚ್ಚಳ

Lingaraj Badiger

ಬೆಂಗಳೂರು: ನಗರದಲ್ಲಿ ಹನಿಟ್ರ್ಯಾಪ್ ಮೂಲಕ ಹಣ ಉಳ್ಳವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಇಂಥ ಗ್ಯಾಂಗ್ ಒಂದು ತಂತ್ರಜ್ಞರೊಬ್ಬರನ್ನು ಸುಲಿಗೆ ಮಾಡಿದೆ.

ಇತ್ತೀಚೆಗೆ ನಗರದ ಗಾರೆಪಾಳ್ಯ ನಿವಾಸಿ ಸಾಫ್ಟ್ ವೇರ್ ತಂತ್ರಜ್ಞರೊಬ್ಬರು ಹನಿಟ್ರ್ಯಾಪ್ ಸುಲಿಗೆಕೋರರಿಂದ ತತ್ತರಿಸಿದ್ದಾರೆ. ಇವರು ತರಕಾರಿ ತರಲು ಮನೆ ಸಮೀಪದ ಸೂಪರ್ ಮಾರ್ಕೇಟಿಗೆ ಹೋಗಿದ್ದಾಗ ಮಹಿಳೆಯೊಬ್ಬರ ಪರಿಚಯವಾಗಿದೆ. ಇದು ಸ್ನೇಹವಾಗಿ ಮಾರ್ಪಾಡಾಗಿದೆ. ವಾರಾಂತ್ಯಗಳಲ್ಲಿ ಇವರು ರೆಸ್ಟೋರೆಂಟ್, ಹೋಟೆಲ್ ಗಳಿಗೆ ಹೋಗುತ್ತಿದ್ದರು. ಬಳಿಕ ತನ್ನ ಕುಟುಂಬ ಸದಸ್ಯರನ್ನು ಪರಿಚಯ ಮಾಡಿಕೊಡುವುದಾಗಿ ಮಹಿಳೆ ಕರೆದಿದ್ದಾರೆ. ಅದರಂತೆ ತಂತ್ರಜ್ಞ ಅವರ ಮನೆಗೆ ಹೋಗಿದ್ದಾರೆ.

ಮನೆಯ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಮೊದಲೇ ಯೋಜನೆ ರೂಪಿತವಾಗಿರುವಂತೆ ಮಹಿಳೆಯ ಸಂಬಂಧಿಗಳು ಎನ್ನಲಾದವರು ಒಳನುಗ್ಗಿದ್ದಾರೆ. ತಂತ್ರಜ್ಞನನ್ನು ಬೆದರಿಸಿದ್ದಾರೆ. ಬಲವಂತದಿಂದ ಪೋಟೋಗಳನ್ನು ಚಿತ್ರೀಕರಿಸಿದ್ದಾರೆ. 10 ಲಕ್ಷ ಕೊಡಲು ಒತ್ತಾಯಿಸಿದ್ದಾರೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಇದಕ್ಕೆ ಮಣಿಯದೇ ಇದ್ದಾಗ ಯುವ ತಂತ್ರಜ್ಞನ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ನಗದು. ಐಪೋನ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಯುವ ತಂತ್ರಜ್ಞ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದು ದುರ್ಘಟನೆ ವಿವರಿಸಿದ್ದಾರೆ. ಸ್ನೇಹದಿಂದ ನಟಿಸಿ ಸುಲಿಗೆ ಆಗುವಂತೆ ಮಾಡಿದ ಮಹಿಳೆ, ಸುಲಿಗೆ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹನಿಟ್ರ್ಯಾಪ್ ಚಟುವಟಿಕೆಗಳನ್ನು ನಡೆಸುವ ಅಪಾಯಕಾರಿ ಗ್ಯಾಂಗುಗಳು ಮೊದಲೇ ಸುಲಿಗೆ ಮಾಡಬೇಕಾದ ಯುವಕರನ್ನು ಗುರುತಿಸಿಕೊಳ್ಳುತ್ತವೆ. ನಂತರ ತಮ್ಮ ಗ್ಯಾಂಗಿನ ಯುವತಿಯರ ಜೊತೆ ಪರಿಚಯವಾಗುವಂತೆ ಮಾಡುತ್ತಾರೆ. ಪರಿಚಯ ಸ್ನೇಹಕ್ಕೆ ತಿರುಗಿ ಸಲಿಗೆ ಬೆಳೆದ ನಂತರ ಪೋಟೋ, ವಿಡಿಯೋಗಳನ್ನು ತೆಗೆದು ಸುಲಿಗೆ ಮಾಡುತ್ತಾರೆ ಎನ್ನಲಾಗಿದೆ.

SCROLL FOR NEXT