ರಾಜ್ಯ

ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಯ ಗುರಿ: ನಾಸ್ಕಾಂ ಜೊತೆ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ

Nagaraja AB

ಬೆಂಗಳೂರು: ಉದ್ಯಮ ರಂಗ ನಿರೀಕ್ಷಿಸುವಂತಹ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಹತ್ವಾಕಾಂಕ್ಷೆಯಿಂದ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಇಂದು ನಾಸ್ಕಾಂ ( ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಪ್ಟ್ ವೇರ್ ಅಂಡ್ ಸರ್ವೀಸ್ ಕಂಪನೀಸ್ ) ಜೊತೆ ಒಡಂಬಡಿಕೆಗೆ ಸಹಿ ಹಾಕಿತು.

ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಇದಕ್ಕೆ ಅಂಕಿತ ಹಾಕಲಾಯಿತು. ಬಳಿಕ ಮಾತನಾಡಿದ ಅಶ್ವತ್ಥ ನಾರಾಯಣ,  ಒಡಂಬಡಿಕೆಯು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಇದರಿಂದ ಪ್ರತಿ ವರ್ಷ ಐದು ಲಕ್ಷ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಲಾಭವಾಗಲಿದೆ ಎಂದು ಹೇಳಿದರು.

ಈ ಉಪ ಕ್ರಮದಿಂದಾಗಿ ನಾಸ್ಕಾಂನ ಫ್ಯೂಚರ್ ಸ್ಕಿಲ್ಸ್ ಫ್ರೈಮ್ ವೇದಿಕೆಯಲ್ಲಿರುವ ಕೌಶಲ್ಯಾಭಿವೃದ್ಧಿ ಕೋರ್ಸ್ ಗಳು ರಾಜ್ಯದ ಪದವಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಆನ್ ಲೈನ್ ಮೂಲಕ ಸುಲಭವಾಗಿ ಲಭ್ಯವಾಗಲಿವೆ. ಈ ಒಡಂಬಡಿಕೆಯಲ್ಲಿ ಗುಣಮುಟ್ಟದಿಂದ ಕೂಡಿರುವ ಕೋರ್ಸ್ ಗಳು, ಬೋಧಕ ಸಿಬ್ಬಂದಿಗೆ ತರಬೇತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯ ಗಮನ ಕೊಡಲಾಗಿದೆ ಎಂದು ತಿಳಿಸಿದರು.

ಈ ಒಡಂಬಡಿಕೆಯ ಫಲವಾಗಿ ಕಂಪ್ಯೂಟರ್ ವಿಜ್ಞಾನವನ್ನು ಹೊರತುಪಡಿಸಿ ಬೇರೆ ವಿಭಾಗಗಳಲ್ಲಿರುವ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಪದವಿಯ ಮೊದಲನೇ ವರ್ಷದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೂರನೇ ವರ್ಷದಲ್ಲಿ ಸೈಬರ್ ಸೆಕ್ಯೂರಿಟಿ ಕೋರ್ಸ್ ಗಳು ಲಭ್ಯವಾಗಲಿದೆ. ಇವುಗಳ ಕಲಿಕೆ ಕಡ್ಡಾಯವಾಗಿದೆ. ಈ ಕೋರ್ಸ್ ಗಳನ್ನು ಮೈಕ್ರೋಸಾಫ್ಟ್ ಮತ್ತು ಸಿಸ್ಕೋ ಕಂಪನಿಗಳು ರೂಪಿಸಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸಲಾಗುವುದು, ಇದನ್ನು ಕಲಿಯಲು ಯಾವುದೇ ಶುಲ್ಕದ ಹೊರೆ ಇರುವುದಿಲ್ಲ ಎಂದು ಸಚಿವರು ವಿವರಿಸಿದರು.

SCROLL FOR NEXT