ರಾಜ್ಯ

ಎನ್ಇಪಿ ಜಾರಿಯಿಂದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ಬಿಎಸ್ ಸಿ ಫಾರ್ಮಾ ಕೋರ್ಸ್ ಪ್ರಾರಂಭ

Srinivas Rao BV

ಬೆಂಗಳೂರು: ಇಂಜಿನಿಯರಿಂಗ್ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಿಂದ ಕರ್ನಾಟಕದ ತಾಂತ್ರಿಕ ಶಿಕ್ಷಣದಲ್ಲಿ ದೊಡ್ಡ ಪ್ರಮಾಣದ ಪರಿವರ್ತನೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಷ್ಟ್ರೀಯ  ಶಿಕ್ಷಣ ನೀತಿ 2020 ರ ಅನುಸಾರ ಕರ್ನಾಟಕದಲ್ಲಿ ಇಂಜಿನಿಯರಿಂಗ್ ಪಠ್ಯಕ್ರಮ, ತಾಂತ್ರಿಕ ಶಿಕ್ಷಣಕ್ಕಾಗಿ  ಕರ್ನಾಟಕ ನೆಚ್ಚಿನ ತಾಣ ಅಭಿಯಾನ, ಕನ್ನಡ ಮಾಧ್ಯದಲ್ಲಿ ಇಂಜಿನಿಯರಿಂಗ್ ಶಿಕ್ಷಣ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ 4  ವರ್ಷಗಳ ಬಿಎಸ್ಸಿ ಫಾರ್ಮಾ ಕೋರ್ಸ್ ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು.

ಇದೊಂದು ಐತಿಹಾಸಿಕ ಹಾಗೂ ಗಮನಾರ್ಹ ದಿನವಾಗಿದೆ ಎಂದು  ತಿಳಿಸಿದ ಮುಖ್ಯಮಂತ್ರಿಗಳು, ಇಂತಹ ಕಾರ್ಯಕ್ರಮಗಳು ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದಾಗ ಮಾತ್ರ ಅನುಷ್ಠಾನಕ್ಕೆ ತರಲು ಸಾಧ್ಯ ಎಂದರು. ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಗುಣಮಟ್ಟದ ಶಿಕ್ಷಣವನ್ನು  ನೀಡಬೇಕು. ಇದಕ್ಕಾಗಿ ಅಗತ್ಯವಿರುವ ಸಂಶೋಧನೆ, ಅಧ್ಯಯನಗಳನ್ನು ಕೈಗೊಂಡು ಈ ಮಹತ್ತರವಾದ ಬದಲಾವಣೆಯನ್ನು ತರಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿವರು,  ಎಲ್ಲಾ ಅಡೆತಡೆಗಳ ನಡುವೆಯೂ ಎನ್.ಇ.ಪಿ ರೂಪಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡರು. ಕರ್ನಾಟಕ ಸರ್ಕಾರವೂ ಸಹ ಎಲ್ಲಾ ವಿರೋಧದ ನಡುವೆಯೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾಗೊಳಿಸುತ್ತಿದೆ ಎಂದರು.  

ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣವಾಗಿ  ಯಶಸ್ವಿಯಾಗಲು ಕೆಳಹಂತದಿಂದ ಮೇಲ್ಮಟ್ಟದವರೆಗೆ ಬದಲಾವಣೆಯಾಗಬೇಕು. ಶಿಕ್ಷಕರಿಂದ ಹಿಡಿದು ವಿದ್ಯಾರ್ಥಿಗಳ ಮನಸ್ಥಿತಿಯಲ್ಲಿಯೂ  ಮಾರ್ಪಾಡು ಅಗತ್ಯ ಎಂದ ಮುಖ್ಯಮಂತ್ರಿಗಳು, ನಾವು ತಂತ್ರಜ್ಞಾನ ಚಾಲಿತ ಸಮಾಜದಲ್ಲಿದ್ದು,  ಕರ್ನಾಟಕದ ತಾಂತ್ರಿಕ ಕಾಲೇಜುಗಳು ಜನರ ಬದುಕಿನಲ್ಲಿ ಬದಲಾವಣೆಯನ್ನು ತರುವ ದಿಸೆಯಲ್ಲಿ ಮುಂಚೂಣಿಯಲ್ಲಿರಬೇಕು ಎಂದು ತಿಳಿಸಿದರು.  

ಕ್ಲಾಸ್ ರೂಮ್‌ಗಳು ಅಪ್ರಸ್ತುತವಾಗುತ್ತಿರುವ ಕಾಲಘಟ್ಟದಲ್ಲಿ, ಪರಿವರ್ತನೆಗೆ  ಹೊಂದಿಕೊಳ್ಳುವ ಹಾಗೂ ಅದನ್ನು ನಿಭಾಯಿಸುವ ಬಗೆಯನ್ನು ಅರಿತುಕೊಳ್ಳುವುದು ಅವಶ್ಯಕ ಎಂದರು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಒಂದು ಹೆಜ್ಜೆ ಮುಂದಿದ್ದು, ಎನ್.ಇ.ಪಿ ಅನುಷ್ಠಾನಗೊಳಿಸುತ್ತಿರುವ ಇಂಜಿನಿಯರಿಂಗ್ ಕಾಲೇಜುಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ಮಾತನಾಡಿ, ಕರ್ನಾಟಕ ಸರ್ಕಾರ ಅತ್ಯಂತ ಕಡಿಮೆ ಅವಧಿಯಲ್ಲಿ ಎನ್.ಇ.ಪಿ ಅನುಷ್ಠಾನಗೊಳಿಸಿದ್ದು, ಪ್ರಸ್ತುತ ನ್ಯಾಕ್ ಮಾನ್ಯತೆ ಪಡೆದ  66 ಇಂಜಿನಿಯರಿಂಗ್ ಕಾಲೇಜುಗಳು ಎನ್.ಇ.ಪಿ  ಅನುಷ್ಠಾನಗೊಳಿಸಲು ಮುಂದಾಗಿದೆ ಎಂದರು.  

ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 4 ವರ್ಷಗಳ ಬಿಎಸ್ಸಿ ಫಾರ್ಮಾ ಕೋರ್ಸ್ ಪ್ರಾರಂಭಕ್ಕೆ ಆದೇಶ ಪತ್ರಗಳನ್ನು ಹಾಗೂ ಕನ್ನಡದಲ್ಲಿ ಇಂಜಿನಿಯರಿಂಗ್ ಪಠ್ಯಪುಸ್ತಕವನ್ನು  ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.

SCROLL FOR NEXT