ರಾಜ್ಯ

ಕಲಬುರಗಿಯಲ್ಲಿ ಲಘು ಭೂಕಂಪನ: ಗಡಿಕೇಶ್ವರದಲ್ಲಿ 3 ಬಾರಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ ಸೃಷ್ಟಿ

Manjula VN

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಪದೇ ಪದೇ ಭೂಮಿ ಕಂಪಿಸುತ್ತಿದೆ. ಇದರಿಂದ ಭಯಭೀತರಾಗಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಸ್ಥರು ತಮ್ಮ ಕುಟುಂಬಗಳ ಸಮೇತ ಗಂಟು ಮೂಟೆ ಕಟ್ಟಿಕೊಂಡು ಗ್ರಾಮವನ್ನು ತೊರೆಯುತ್ತಿದ್ದಾರೆ.

ಒಂದೇ ವಾರದಲ್ಲಿ 7 ಬಾರಿ ಭೂಕಂಪವಾಗಿರುವ ಗಡಿಕೇಶ್ವರದಲ್ಲಿ ನಿನ್ನೆ ಮತ್ತೆ 3 ಬಾರಿ ಭೂಮಿ ಕಂಪಿಸಿದ್ದು, ಗ್ರಾಮಸ್ಥರು ಆತಂಕಕ್ಕೊಗಾಗಿದ್ದಾರೆ. ಅಲ್ಲದೆ, ಸಾಕಷ್ಟು ಜನರು ಗ್ರಾಮ ತೊರೆಯಲು ಮುಂದಾಗಿದ್ದು, ಪರಿಣಾಮ ಊರಿನ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಜನ ದಟ್ಟಣೆ ಹೆಚ್ಚಾಗಿರುವುದು ಕಂಡು ಬಂದಿತ್ತು. 

ಕೆಲವರು ಟ್ರ್ಯಾಕ್ಟರ್, ಎತ್ತಿನ ಬಂಡಿ, ಕಾರು, ಟಂಟಂಗಳ ಮೂಲಕ ಮನೆಯ ಸಾಮಾನು ಸರಂಜಾಮು ಸಮೇತ ಗ್ರಾಮವನ್ನು ತೊರೆಯುತ್ತಿದ್ದಾರೆ.  ಈಗಾಗಲೇ ಅರ್ಧದಷ್ಟು ಗ್ರಾಮ ಖಾಲಿಯಾಗಿದೆ. ಇಷ್ಟಾದರೂ ಅಧಿಕಾರಿಗಳು ಗ್ರಾಮಕ್ಕೆ ಬಂದು ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಗ್ರಾಮದ ಜನರು ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರ ಕೂಡಲೇ ಶೆಡ್ ಗಳನ್ನು ತೆರೆದು, ಜನರಿಗೆ ಆಶ್ರಯಗಳನ್ನು ನೀಡಬೇಕು ಎಂದು ಗ್ರಾಮ ಪಂಚಾಯಿತಿ ಉಪ ಅಧ್ಯಕ್ಷ ಜೈಶಾನ್ ಅಲಿ ಪಟ್ಟೇದಾರ್ ಅವರು ಆಘ್ರಹಿಸಿದ್ದಾರೆ. 

ಸೋಮವಾರ ರಾತ್ರಿ ಭೂಮಿ 7ಕ್ಕೂ ಹೆಚ್ಚು ಬಾರಿ ಕಂಪಿಸಿತ್ತು. ಮಂಗಳವಾರ ಎರಡು ಬಾರಿ ಕಂಪಿಸಿದೆ. ಆದರೆ ಅಧಿಕಾರಿಗಳು ಮಾತ್ರ ಬೆಳಿಗ್ಗೆ 10 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ನಡುವೆ ಭೂಕಂಪನದ ಪರಿಣಾಮ ಗ್ರಾಮದಲ್ಲಿ 8 ಮನೆಗಳೂ ಕೂಡ ಕುಸಿದು ಬಿದ್ದಿದೆ. ಕೆಲವು ಮನೆಗಳಲ್ಲಿ ಮನೆಗಳ ಗೋಡೆಗಳು ಬಿರುಕು ಬಿದ್ದಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಗಾಯಗಳಾಗಿಲ್ಲ. 

ಗ್ರಾಮದಲ್ಲಿ 800 ಮನೆಗಳಿದ್ದು, 4,000 ದಷ್ಟು ಜನಸಂಖ್ಯೆಯಿದೆ. ಆತಂಕಕ್ಕೊಳಗಾಗಿ ಈಗಾಗಲೇ ಶೇ.60ರಷ್ಟು ಜನರು ಗ್ರಾಮ ತೊರೆದಿದ್ದಾರೆ. ಇದೀಗ ಗ್ರಾಮದಲ್ಲಿ ಜನರಿಲ್ಲದೆ ಬಿಕೋ ಎನ್ನುವಂತರ ಪರಿಸ್ಥಿತಿ ಎದುರಾಗಿದೆ. 

ನಮಗೆ ಬೇರೆ ದಾರಿಯಿಲ್ಲ. ಮನೆಯನ್ನು ತೊರೆಯಲೇ ಬೇಕಿದೆ ಎಂದು ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾದು ಕುಳಿತಿರುವ ತೇಜಮ್ಮ ಎಂಬುವವರು ಹೇಳಿದ್ದಾರೆ. 

ಭೂಮಿ ಕಂಪಿಸಿದ ಬಳಿಕ ನನ್ನ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಇದೀಗ ಮನೆಗಳಿಗೆ ಬೀಗ ಹಾಕಿಕೊಂಡು ಗ್ರಾಮ ತೊರೆಯುತ್ತಿದ್ದೇವೆ. ಪ್ರತೀ ವರ್ಷ ನಾವು ನವರಾತ್ರಿಯನ್ನು ಆಚರಿಸುತ್ತಿದ್ದೆವು. ಪ್ರತಿನಿತ್ಯ ದೇವರ ಮುಂದೆ ದೀಪವನ್ನು ಹಚ್ಚುತ್ತಿದ್ದೆವು. ಆದರೆ, ಸರ್ವಶಕ್ತನು ಆಗಿರುವ ದೇವರು ನಮ್ಮ ರಕ್ಷಣೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಈ ನಡುವೆ ಭೂಕಂಪನ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿಯವರು, ಹಾನಿಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಕೇಂದ್ರಗಳನ್ನ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಹೇಳಿದ್ದಾರೆ. 

ಸತತ ಎರಡು ದಿನಗಳಿಂದ ಲಘು ಭೂಕಂಪನದ ಬಗ್ಗೆ ವರದಿಯಾಗಿದೆ. ಎಸ್'ಡಿಆರ್'ಎಫ್ ಹಾಗೂ ಜಿಲ್ಲಾಡಳಿತದ ಜೊತೆ ಸಭೆ ನಡೆಸಿದ್ದೇನೆ. ಈ ಕುರಿತು ಮಾಹಿತಿ ನೀಡಲು ತಿಳಿಸಿದ್ದೇನೆಂದು ತಿಳಿಸಿದ್ದಾರೆ.

SCROLL FOR NEXT