ರಾಜ್ಯ

ನಗರವಾಸದ ಗೀಳಿಗೆ ಬಿದ್ದು ಜಗಳ: ಪತ್ನಿ ಕೊಂದು, ಆತ್ಮಹತ್ಯೆಗೆ ಶರಣಾದ ಪತಿ

Manjula VN

ರಾಮನಗರ: ನಗರವಾಸದ ಗೀಳೊಂದು ಎರಡು ಜೀವನಗಳನ್ನು ಬಲಿಪಡೆದುಕೊಂಡಿವೆ. ಪಟ್ಟಣ ವಾಸದ ಆಸೆಗೆ ಬಿದ್ದ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.

ಪತ್ನಿ ಇಂದ್ರಮ್ಮ(35) ನನ್ನು ಕೊಂದು ಬಳಿಕ ಪತಿ ದೇಸಿಗೌಡ (40) ತಾನು ಕೂಡ ನೇಣಿಗೆ ಶರಣಾಗಿದ್ದಾನೆ. 18 ವರ್ಷದ ಹಿಂದೆ ಇಂದ್ರಮ್ಮ ಮತ್ತು ದೇಸಿಗೌಡ ವಿವಾಹವಾಗಿದ್ದರು. 

ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದ ದಂಪತಿ, ಕೊವಿಡ್ ಹಿನ್ನೆಲೆಯಲ್ಲಿ ಗುಡ್ಡ ವೀರನಹೊಸಹಳ್ಳಿ ಗ್ರಾಮಕ್ಕೆ ವಾಪಾಸ್ ಬಂದು ನೆಲೆಸಿದ್ದರು. ಇತ್ತೀಚೆಗೆ ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದಿದ್ದು, ನಗರ ವಾಸಕ್ಕೆ ಗೀಳು ಬಿದಿದ್ದ ಪತ್ನಿ ಇಂದಿರಾ ಪದೇ ಪದೇ ಗಂಡನನ್ನು ಮತ್ತೆ ಬೆಂಗಳೂರಿಗೆ ವಾಪಸ್ ಹೋಗುವಂತೆ ಪೀಡಿಸುತ್ತಿದ್ದಳು. 

ಗ್ರಾಮದಲ್ಲಿ ಚಿಲ್ಲರೆ ಹಾಗೂ ಕೋಳಿ ಅಂಗಡಿ ಇಟ್ಟುಕೊಂಡು ದಂಪತಿಗಳು ಜೀವನ ಸಾಗಿಸುತ್ತಿದ್ದರು. ಈ ನಡುವೆ ಇಂದ್ರಮ್ಮ ಗಂಡನನ್ನು ಮೂಲೆಗುಂಪು ಮಾಡಿ ತಾನೇ ಸ್ವತಃ ಅಂಗಡಿಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಳು.

ಪ್ರತಿನಿತ್ಯ ದಂಪತಿ ನಡುವೆ ಜಗಳವಾಗುತ್ತಿತ್ತು. ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ಮಾಡಿಸಿದ್ದರು. ಈ ಮಧ್ಯೆ ಹೆಂಡತಿಯ ಉಪಟಳದಿಂದ ಬೇಸತ್ತಿದ್ದ ದೇಸೀಗೌಡ ಇಬ್ಬರು ಜೀವಂತವಾಗಿರಬಾರದು ಎಂಬ ನಿಧಾರಕ್ಕೆ ಬಂದು ಇಂದ್ರಮ್ಮ ಮಲಗಿದ್ದ ವೇಳೆ ಚಾಕುವಿನಿಂದ ಕತ್ತು ಕೊಯ್ದು ನಂತರ ತಾನೂ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT