ರಾಜ್ಯ

ಬಿ.ಎಡ್ ಪಠ್ಯಪುಸ್ತಕದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಷಯ: ತುಮಕೂರಿನಲ್ಲಿ ಲೇಖಕ, ಸಹಾಯಕ ಪ್ರಾಧ್ಯಾಪಕ ಬಂಧನ

Sumana Upadhyaya

ತುಮಕೂರು: ಪಠ್ಯಪುಸ್ತಕದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತುಮಕೂರು ಪೊಲೀಸರು ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಿದ್ದಾರೆ. ಪುಸ್ತಕದ ವಿನ್ಯಾಸಕ ಮೈಸೂರು ಮೂಲದ ಪ್ರಕಾಶನ ಸಂಸ್ಥೆ ವಿರುದ್ಧ ಕೂಡ ಕೇಸು ದಾಖಲಿಸಲಾಗಿದೆ.

ತುಮಕೂರು ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿಯ ಮಾಜಿ ಸದಸ್ಯ ಹಾಗೂ ಅಕ್ಷಯ ಕಾಲೇಜಿನ ಪ್ರಾಧ್ಯಾಪಕ 56 ವರ್ಷದ ಬಿ ಆರ್ ರಾಮಚಂದ್ರಯ್ಯ ಅವರನ್ನು ಬಂಧಿಸಲಾಗಿದೆ. ಅವರು ತಮ್ಮ ಇಂಗ್ಲಿಷ್ ಪುಸ್ತಕ Moulya Darshana-The Essence of Value Education ನಲ್ಲಿ ಇಸ್ಲಾಂ ವಿರುದ್ಧ ನಿಂದನಕಾರಿ ವಾಕ್ಯಗಳನ್ನು ಬಳಸಿದ್ದಾರೆ ಎಂದು ವಕೀಲ ರೋಶನ್ ನವಾಜ್ ಎಂಬುವವರು ದೂರು ನೀಡಿದ್ದರು. ಇದನ್ನು ವಿಸ್ಮಯ ಪ್ರಕಾಶನ ವಿನ್ಯಾಸ ಮಾಡಿದ್ದು ಅದರ ವಿರುದ್ಧ ಕೇಸು ದಾಖಲಿಸಲಾಗಿದೆ. ತುಮಕೂರಿನ ನ್ಯೂ ಎಕ್ಸ್ಟೆನ್ಷನ್ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 157ರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

220 ರೂಪಾಯಿ ಬೆಲೆಯ 260 ಪುಟಗಳ ಪುಸ್ತಕವನ್ನು ಮೂರನೇ ಸೆಮಿಸ್ಟರ್ ನ ಬಿ ಎಡ್ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಪುಸ್ತಕ ಕೋಮು ಸೌಹಾರ್ದಕ್ಕೆ ಧಕ್ಕೆಯನ್ನುಂಟುಮಾಡುತ್ತಿದ್ದು, ಸಮಾಜದಲ್ಲಿ ದ್ವೇಷ, ಅಸೂಯೆ ಬೆಳೆಯಲು ಕಾರಣವಾಗುತ್ತದೆ. ಇದರಿಂದಾಗಿ ಲೇಖಕರ ಮತ್ತು ಪುಸ್ತಕ ವಿನ್ಯಾಸಕರು, ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನವಾಜ್ ದೂರಿನಲ್ಲಿ ಒತ್ತಾಯಿಸಿದ್ದರು.

ಪುಸ್ತಕಕ್ಕೆ ಸಂಪೂರ್ಣ ನಿಷೇಧ ಹೇರಿ ಎಂದ ಪಿಎಫ್ಐ: ಈಗಾಗಲೇ ಪುಸ್ತಕದ ಸಾವಿರ ಪ್ರತಿಯನ್ನು ಮುದ್ರಣಗೊಳಿಸಲಾಗಿದ್ದು ಅದನ್ನು ಸಂಪೂರ್ಣವಾಗಿ ನಾಶಗೊಳಿಸಿ ಪುಸ್ತಕಕ್ಕೆ ಸರ್ಕಾರ ನಿಷೇಧ ಹೇರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಒತ್ತಾಯಿಸಿದೆ. ಕೆಲ ದಿನಗಳ ಹಿಂದೆ ಲೇಖಕ ಸಹಾಯಕ ಪ್ರಾಧ್ಯಾಪಕರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

2019ರಲ್ಲಿ ಪ್ರಕಟಗೊಂಡ ಪುಸ್ತಕಕ್ಕೆ ಈಗ ಏಕೆ ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಪಿಎಫ್ಐ ಸದಸ್ಯ ಹಕೀಂ, ಬಿ.ಎಡ್ ಮೂರನೇ ಸೆಮಿಸ್ಟರ್ ಇತ್ತೀಚೆಗೆ ಆರಂಭವಾದ ಮೇಲೆ ನಮಗೆ ಇದು ಗಮನಕ್ಕೆ ಬಂತು ಎನ್ನುತ್ತಾರೆ.

ಈ ಬಗ್ಗೆ ತುಮಕೂರು ವಿಶ್ವವಿದ್ಯಾಲಯವನ್ನು ಕೇಳಿದರೆ ತಮಗೂ ಶಿಕ್ಷಣ ಸಂಸ್ಥೆಗೂ ಲೇಖಕರಿಗೂ ಸಂಬಂಧವಿಲ್ಲ. ಕೆಲವು ವರ್ಷಗಳ ಹಿಂದೆ ಅವರು ಶೈಕ್ಷಣಿಕ ಮಂಡಳಿಯ ಸದಸ್ಯರಾಗಿದ್ದರು. ಆದರೆ ನಾವು ವಿದ್ಯಾರ್ಥಿಗಳಿಗೆ ಆ ಪುಸ್ತಕವನ್ನು ಓದುವಂತೆ ಸೂಚಿಸಿರಲಿಲ್ಲ ಎಂದು ಉಪ ಕುಲಪತಿ ಪ್ರೊ ವೈ ಎಸ್ ಸಿದ್ದೇಗೌಡ ತಿಳಿಸಿದ್ದಾರೆ.

SCROLL FOR NEXT