ರಾಜ್ಯ

ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲು ಸರ್ಕಾರ ಮುಂದು!

Manjula VN

ಬೆಳಗಾವಿ: ಹೈದರಾಬಾದ್-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕವಾಗಿ ಮರುನಾಮಕರಣ ಮಾಡಿದ ರೀತಿಯಲ್ಲಿಯೇ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕೆನ್ನುವ ಕೂಗಿಗೆ ಶೀಘ್ರದಲ್ಲಿಯೇ ಸರ್ಕಾರದ ಅಧಿಕೃತ ಮುದ್ರೆ ಬೀಳಲಿದೆ.

ಈ ಘೋಷಣೆ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಶನಿವಾರ ಭರವಸೆ ನೀಡಿದ್ದಾರೆ.

ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವ-2021ಕ್ಕೆ ಶನಿವಾರ ಚಾಲನೆ ನೀಡಿದ ಬೊಮ್ಮಾಯಿಯವರು ಈ ಭರವಸೆಯನ್ನು ನೀಡಿದರು.

ಜೊತೆಗೆ ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಆಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ಈ ಹಿಂದ ಕಿತ್ತೂರು ಜ್ಯೋತಿಯು ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿ ರಾಜ್ಯದಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ರ ಕ್ರಮಕ್ಕೆ ಆದೇಶಿಸಲಾಗುವುದು ಎಂದರು.

ಕಿತ್ತೂರು ಚೆನ್ನಮ್ಮ ಝಾನ್ಸಿಯ ರಾಣಿ ಲಕ್ಷ್ಮಿಬಾಯಿಯವರಿಗಿಂತ 40 ವರ್ಷಗಳ ಮೊದಲೇ ಸ್ವಾತಂತ್ರ್ಯಕ್ಕಾಗಿ ಕತ್ತಿ ಝಳಪಿಸಿದ್ದರು. ಈ ಐತಿಹಾಸಿಕ ಸಾಧನೆಯನ್ನು ಜಗತ್ತಿಗೆ ಸಾರುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಪ್ರಥಮ ಮಹಿಳೆ ಎಂಬುದನ್ನು ಸಾಬೀತುಪಡಿಸಬೇಕಿದೆ. ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಧುಮುಕಿದ ಕಿತ್ತೂರು ರಾಣಿ ಚೆನ್ನಮ್ಮ ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ನಡುವೆ ತಾಯಿ-ಮಗನ‌ ಬಾಂಧವ್ಯವಿತ್ತು. ಬ್ರಿಟೀಷರ ಕುತಂತ್ರಕ್ಕೆ ರಾಯಣ್ಣ ಸೆರೆಸಿಕ್ಕಾಗ ಚೆನ್ನಮ್ಮ ಅಧೀರರಾಗುತ್ತಾರೆ. ಸತ್ಯ, ನ್ಯಾಯ‌ ಹಾಗೂ ದೇಶಕ್ಕಾಗಿ ಹೋರಾಡಲು ನಾವು ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.

SCROLL FOR NEXT