ರಾಜ್ಯ

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಮಿಕರ ನಿಗೂಢ ಕಣ್ಮರೆ!

Nagaraja AB

ಬಳ್ಳಾರಿ: ಜಿಲ್ಲೆಯ ಸಂಡೂರಿನ ಉಕ್ಕು ಸ್ಥಾವರ ಒಂದರಲ್ಲಿ ಕಾರ್ಮಿಕನಾಗಿದ್ದ ಬೀದರ್ ನಿಂದ ಬಂದಿದ್ದ 24 ವರ್ಷದ ಯುವಕನೊಬ್ಬ ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದಾನೆ. ಇದರಿಂದ ಆತಂಕಗೊಂಡ ಕುಮಾರ್ ನ ಕುಟುಂಬಸ್ಥರು, ಹುಡುಕಿ ಹುಡುಕಿ ಸುಸ್ತಾಗಿ ಕೊನೆಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಇದು ಬರೀ ಕುಮಾರ್ ಮಾತ್ರವಲ್ಲ, ಕಳೆದೊಂದು ವರ್ಷದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಮಿಕರ ನಾಪತ್ತೆ ಕುರಿತು  ಎಂಟು ದೂರುಗಳು ದಾಖಲಾಗಿವೆ. ಕಳೆದ ಮೂರು ವರ್ಷಗಳಲ್ಲಿ ಇಂತಹ ದೂರುಗಳ ಸಂಖ್ಯೆ 30 ಆಗಿವೆ. 

ಗಣಿ ಮತ್ತು ಉಕ್ಕು ಸ್ಥಾವರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ದೇಶದ ವಿವಿಧ ಕಡೆಗಳಲ್ಲಿ ಉದ್ಯೋಗಕ್ಕಾಗಿ ಬಂದಿರುತ್ತಾರೆ. ನಾಪತ್ತೆಯಾದ ಬಹುತೇಕ ಕಾರ್ಮಿಕರಲ್ಲಿ ಬೇರೆ ರಾಜ್ಯಕ್ಕೆ ಸೇರಿದವರೆ ಹೆಚ್ಚಾಗಿದ್ದಾರೆ. ಈ ಪೈಕಿ ಅನೇಕ ಮಂದಿ ಕೆಲಸದ ಸ್ಥಳದಲ್ಲಿ ಅಪಘಾತವಾಗಿ ಸಾವನ್ನಪ್ಪಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕುಮಾರ್ ತಂದೆ ಗುಂಡಪ್ಪ ಗುಣವಂಶಿ, ತಮ್ಮ ಕುಟುಂಬಕ್ಕೆ ಕುಮಾರ್ ಆಧಾರವಾಗಿದ್ದ. ಉಕ್ಕು ಸ್ಥಾವರದಲ್ಲಿ ಕೆಲಸಕ್ಕಾಗಿ ಬಳ್ಳಾರಿಗೆ ಬಂದಿದ್ದ. ಕುಮಾರ್ ಕಾಣಿಸುತ್ತಿಲ್ಲ ಎಂದು ಅಕ್ಟೋಬರ್ 15 ರಂದು ಆತನ ಸ್ನೇಹಿತ ಮಾಹಿತಿ ನೀಡಿದ. ಆತನಿಲ್ಲದೆ ಜೀವನವನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ ಎಂದರು. ಆತನನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಗಣಿ ಹಾಗೂ ಉಕ್ಕು ಸ್ಥಾವರಗಳಲ್ಲಿ ಅನೇಕ ಉದ್ಯೋಗಾವಕಾಶವಿರುವುದರಿಂದ  ಕರ್ನಾಟಕ ಮಾತ್ರವಲ್ಲದೇ, ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಬರುತ್ತಾರೆ. ಆದರೆ, ಬಹುತೇಕ ಉದ್ಯಮಗಳು ಸುರಕ್ಷತಾ ಕ್ರಮ ಕೈಗೊಳ್ಳದೇ  ಕಾರ್ಮಿಕರು ಗಾಯಗೊಳ್ಳುವುದು, ಸಾಯುವುದು ನಡೆಯುತ್ತಿದೆ ಎಂದು ಕಾರ್ಮಿಕ ಒಕ್ಕೂಟ ಸದಸ್ಯರೊಬ್ಬರು ಆರೋಪಿಸಿದರು.

ಅವಿಜಿತ ಬಳ್ಳಾರಿಯಲ್ಲಿ ಪ್ರತಿ ವರ್ಷ ಸುಮಾರು 200 ನಾಪತ್ತೆ ಪ್ರಕರಣ ದಾಖಲಾಗಿವೆ. ಆದರೆ, ಕಾರ್ಮಿಕರ ನಾಪತ್ತೆ ಪ್ರಕರಣಗಳ ಬಗ್ಗೆ ಪರಿಶೀಲಿಸುವಂತೆ ಸಂಬಂಧಿತ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ ಗಳಿಗೆ ಸೂಚಿಸುತ್ತೇನೆ. ದೂರು ದಾಖಲಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿ ನಿರಾಕರಿಸಿದರೆ ಕೂಡಲೇ ಎಸ್ ಪಿ ಕಚೇರಿ ಸಂಪರ್ಕಿಸುವಂತೆ ಬಳ್ಳಾರಿ ಎಸ್ ಪಿ ಸೈದುಲು ಅದಾವತ್ ಹೇಳಿದರು.

SCROLL FOR NEXT