ರಾಜ್ಯ

ಪ್ರತಿಮೆ, ಧ್ವಜಸ್ತಂಭಗಳಿಂದ ತೊಂದರೆ: ಬಿಬಿಎಂಪಿಗೆ ದೂರು ಸಲ್ಲಿಸಲು ಹೈಕೋರ್ಟ್ ಸೂಚನೆ

Manjula VN

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತಗೊಂಡಿರುವ ಧ್ವಜಸ್ತಂಭಗಳು ಹಾಗೂ ಪ್ರತಿಮೆಗಳ ನಿರ್ಮಾಣದ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮಾಡಿರುವ ಹೈಕೋರ್ಟ್‌, ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿದೆ.

ನಗರದ ನಿವಾಸಿ ಕೆ.ಎಸ್. ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮುರ್ತಿ ಋತುರಾಜ್ ಅವಸ್ತಿ ಮತ್ತು ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಸಾರ್ವಜನಿಕ ಜಾಗದಲ್ಲಿ ನಿರ್ಮಾಣ ಆಗಿರುವ ಪ್ರತಿಮೆಗಳು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿವೆ ಎಂದು ಅರ್ಜಿದಾರರು ವಾದಿಸಿದರು. ‘ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಯಾವುದೇ ನಿರ್ದಿಷ್ಟ ಪ್ರತಿಮೆಗಳನ್ನು ಅರ್ಜಿದಾರರು ಉಲ್ಲೇಖಿಸಿಲ್ಲ’ ಎಂದು ಬಿಬಿಎಂಪಿ ಪರ ವಕೀಲ ಶ್ರೀನಿಧಿ ಹೇಳಿದರು.

ಈ ವೇಳೆ ವಾದ ಹಾಗೂ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ, ಯಾವ ಪ್ರತಿಮೆಯಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಬಗ್ಗೆ 10 ದಿನಗಳಲ್ಲಿ ಅರ್ಜಿದಾರರು ಬಿಬಿಎಂಪಿ ಮುಖ್ಯ ಆಯಕ್ತರಿಗೆ ದೂರು ಸಲ್ಲಿಸಬೇಕು. ಒಂದು ವೇಳೆ ಅರ್ಜಿದಾರರು ದೂರು ಸಲ್ಲಿಸಿದರೆ, ಆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಲಬೇಕೆಂದು ಬಿಬಿಎಂಪಿಗೆ ನಿರ್ದೇಶಿಸಿ ಅರ್ಜಿ ಇರ್ತರ್ಥಪಡಿಸಿತು

SCROLL FOR NEXT