ರಾಜ್ಯ

ಕೆರೆಗಳ ಸಂರಕ್ಷಣೆಗೆ ಕೆಲಸಕ್ಕಾಗಿ ಬಿಬಿಎಂಪಿಗೆ ಪ್ರಶಸ್ತಿ

Nagaraja AB

ಬೆಂಗಳೂರು: ನಗರದಲ್ಲಿನ 18 ಕೆರೆಗಳ ಪುನಶ್ಚೇತನ ಮತ್ತು ಏಳಕ್ಕೂ ಹೆಚ್ಚು ಕೆರೆಗಳ ಸಂರಕ್ಷಣೆ ಕೆಲಸಕ್ಕಾಗಿ ಬಿಬಿಎಂಪಿಗೆ ಅರ್ಥ್ ಡೆ ನೆಟ್ ವರ್ಕ್ ಸ್ಟಾರ್ ಮುನ್ಸಿಪಾಲ್ ಲೀಡರ್ ಶಿಪ್ ಪ್ರಶಸ್ತಿಯನ್ನು ಶುಕ್ರವಾರ  ಪಡೆದಿದೆ.

ಈ ಪ್ರಶಸ್ತಿಗಾಗಿ ಪುಟ್ಟೇನಹಳ್ಳಿ ನೆರೆಹೊರೆಯ ಕೆರೆ ಸುಧಾರಣಾ ಟ್ರಸ್ಟ್  (ಪಿಎನ್ ಎಲ್ ಐಟಿ) ಬಿಬಿಎಂಪಿಯನ್ನು ನಾಮನಿರ್ದೇಶನ ಮಾಡಿತ್ತು. ಪುಟ್ಟೇನಹಳ್ಳಿ ಕೆರೆ ಪುನಶ್ಚೇತನಕ್ಕಾಗಿ 2009ರಿಂದಲೂ ಈ ಟ್ರಸ್ಟ್ ಬಿಬಿಎಂಪಿಯೊಂದಿಗೆ ಕೆಲಸ ಮಾಡುತ್ತಿದೆ.

ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂತಹ ಯೋಜನೆ ಹಾಗೂ ಕಾರ್ಯ ಕೈಗೊಂಡ ಸ್ಥಳೀಯ ಸಂಸ್ಥೆಗಳಿಗೆ  ಅರ್ಥ್ ಡೇ 50ನೇ ವರ್ಷಚಾರಣೆ ಪ್ರಯುಕ್ತ  ಅರ್ಥ್ ಡೇ ನೆಟ್ ವರ್ಕ್ ಇಂಡಿಯಾದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇಂಡಿಯಾ ಅರ್ಥ್ ಡೇ ಅರ್ಗನೈಷನ್ ಹಿರಿಯ ಮ್ಯಾನೇಜರ್,  ನೀಲಾ ಮಜುಂದಾರ್ ಮತ್ತು ಪಿಎನ್ ಎಲ್ ಐಟಿ ಮುಖ್ಯಸ್ಥೆ ಉಷಾ ರಾಜಗೋಪಾಲನ್ ಶುಕ್ರವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ  ಈ ಪ್ರಶಸ್ತಿ ಪ್ರದಾನ ಮಾಡಿದರು.

ಚಿಕ್ಕಬಸ್ತಿ, ಗುಬ್ಬಲಾಲ, ಯಲ್ಲನಹಳ್ಳಿ, ತಲಘಟ್ಟಪುರ,  ಬೈರಸಂದ್ರ, ಬಸವನಪುರ, ಸಿದ್ದಾಪುರ, ನಗರೇಶ್ವರ ನಾಗೇನಹಳ್ಳಿ, ಮಹಾದೇವಪುರ-2, ಸಾರಕ್ಕಿ, ಬೇಗೂರು, ಹೂರಮಾವು, ಭಟ್ಟರ ಹಳ್ಳಿ, ಕೊತ್ತನೂರು, ನಲ್ಲೂರಳ್ಳಿ, ಗುಂಜೂರು ಪಾಳ್ಯ, ದೇವರಕೆರೆ ಮತ್ತಿತರ ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಬಿಬಿಎಂಪಿ ಈ ವರ್ಷ ಮಾಡಿದೆ. 

 ಸಾರ್ವಜನಿಕರ ಸಹಭಾಗಿತ್ವ ಹಾಗೂ ಹೆಚ್ಚಿನ ಜನರು ತೊಡಗಿಸಿಕೊಂಡರೆ ಹೆಚ್ಚಿನ ಕೆರೆಗಳ ಸಂರಕ್ಷಣೆ ಕಾರ್ಯ ಕೈಗೊಳ್ಳಲು ನೆರವಾಗಲಿದೆ ಎಂದು ಗೌರವ್ ಗುಪ್ತಾ ಹೇಳಿದರು. 
 

SCROLL FOR NEXT