ರಾಜ್ಯ

ಕೈಗಾರಿಕಾ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯ ಕಲ್ಪಿಸಿಕೊಡಿ: ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ

Nagaraja AB

ಬೆಂಗಳೂರು: ರಾಜ್ಯದಲ್ಲಿನ ಪ್ರತಿಯೊಂದು ಕೈಗಾರಿಕಾ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬುಧವಾರ ರಾಮನಗರದ ಹಾರೋಹಳ್ಳಿ, ಬಿಡದಿ, ಜಿಗಣಿ ಸೇರಿದಂತೆ ಮತ್ತಿತರ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಖುದ್ದು ಪರಿಶೀಲಿಸಿದ ಅವರು, ಕೈಗಾರಿಕಾ ಪ್ರದೇಶಗಳಲ್ಲಿ ಮುಖ್ಯವಾಗಿ ರಸ್ತೆ, ವಿದ್ಯುತ್, ನೀರಿನ ಸಂಪರ್ಕ, ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.

ಒಂದು ಹಂತದಲ್ಲಿ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ನಿರಾಣಿ, ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು ಕೊರತೆಯಾದರೆ ಸುಮ್ಮನಿರುವುದಿಲ್ಲ, ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. 

ಬಂಡವಾಳ ಹೂಡಿಕೆಯಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದೇ ನಮ್ಮ ಗುರಿಯಾಗಿದೆ. ಇಲ್ಲಿರುವ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಕೈಗಾರಿಕಾ ಕ್ರಾಂತಿ ಸೃಷ್ಟಿಸಬೇಕು, ಅಗತ್ಯವಿರುವ ಕಡೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ರೋಗ ಗ್ರಸ್ಥ ಕೈಗಾರಿಕೆಗಳಿಗೆ ಕಾಯಕಲ್ಪ ನೀಡಿ ಲಾಭದತ್ತ ಕೊಂಡೊಯ್ಯುವುದು ನನ್ನ ಗುರಿ ಎಂದ ಸಚಿವರು, ಕೆಐಎಡಿಬಿ ಅಧಿಕಾರಿಗಳು ಬಲವಂತದಿಂದ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದು, ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದರು.

SCROLL FOR NEXT