ರಾಜ್ಯ

ಬೆಂಗಳೂರಿನ ವಾಯುನೆಲೆಯ ಬಳಿ ಡ್ರೋನ್ ಹಾರಾಟ: 40 ದಿನಗಳ ನಂತರವೂ ನಿಗೂಢವಾಗಿಯೇ ಉಳಿದ ರಹಸ್ಯ

Harshavardhan M

ಬೆಂಗಳೂರು: ಜಮ್ಮು ಕಾಶ್ಮೀರ ಹಾಗೂ ದೇಶದ ಇತರೆ ಗಡಿ ಪ್ರದೇಶಗಳಲ್ಲಿ ಉಗ್ರರು ಸ್ಫೋಟಕವನ್ನು ಭಾರತದೊಳಕ್ಕೆ ಸಾಗಿಸಲು ಡ್ರೋನ್ ಬಳಕೆ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿರುವ ನಡುವೆಯೇ 40 ದಿನಗಳ ಹಿಂದೆ ಬೆಂಗಳೂರಿನ ಜಾಲಹಳ್ಳಿ ಬಳಿಯ ಭಾರತೀಯ ವಾಯುಪಡೆಯ ಸೇನಾನೆಲೆ ಬಳಿ ಡ್ರೋನ್ ಹಾರಾಟ ಗುಮಾನಿ ವ್ಯಕ್ತವಾಗಿತ್ತು. ವಾಯುನೆಲೆ ಸಮೀಪ ಕತ್ತಲ ಆಗಸದಲ್ಲಿ ನಿಗೂಢ ಬೆಳಕು ಕಂಡುಬಂಡಿದ್ದವು. 

ಈ ಘಟನೆ ಆತಂಕ ಸೃಷ್ಟಿಸಿತ್ತು. ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸಿದ್ದರು. ವ್ಯಾಪ್ತಿ ಸುತ್ತಮುತ್ತ ಡ್ರೋನ್ ಹಾರಿಸಲು ಪರವಾನಗಿ ಹೊಂದಿರುವವರನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. ಆದರೆ ಅವರು ಯಾರೂ ರಾತ್ರಿಯ ಹೊತ್ತಿನಲ್ಲಿ ಡ್ರೋನ್ ಹಾರಿಸಿಲ್ಲ ಎಂದು ಹೇಳಿದ್ದರು. ಇದರಿಂದಾಗಿ ಘಟನೆ ನಿಗೂಢವಾಗಿಯೇ ಉಳಿದಿತ್ತು.

ಘಟನೆ ನಡೆದು 40 ದಿನಗಳ ನಂತರವೂ ವಾಯುನೆಲೆ ಆವರಣವನ್ನು ಕಟ್ಟೆಚ್ಚರದಿಂದ ಕಾಯಲಾಗುತ್ತಿದೆ. ವಾಯುಪಡೆ ಅಧಿಕಾರಿಗಳು ಮತ್ತು ಪೊಲಿಸರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಡಿಸಿಪಿ(ಉತ್ತರ) ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ. ಈ ಘಟನೆ ಕೇವಲ ಒಂದು ಬಾರಿ ಮಾತ್ರವೇ ವರದಿಯಾಗಿದ್ದು ಮತ್ತೊಮ್ಮೆ ಮರುಕಳಿಸಿಲ್ಲ. ಆದಾಗ್ಯೂ ಪೊಲೀಸರರು ಹಾಗೂ ವಾಯುನೆಲೆಯ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿರುವುದಾಗಿ ಅವರು ತಿಳಿಸಿದ್ದಾರೆ.

SCROLL FOR NEXT