ರಾಜ್ಯ

ನವೆಂಬರ್ ವೇಳೆಗೆ ರಾಜ್ಯದ ಎಲ್ಲಾ ವಯಸ್ಕರಿಗೆ ಕೋವಿಡ್ ಲಸಿಕೆ ಹಾಕುವ ಗುರಿ: ಆರೋಗ್ಯ ಸಚಿವ ಸುಧಾಕರ್

Lingaraj Badiger

ಬೆಂಗಳೂರು: ನವೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ವಯಸ್ಕರಿಗೆ ಕೋವಿಡ್ -19 ಲಸಿಕೆ ಹಾಕುವ ಗುರಿಯೊಂದಿಗೆ ಕರ್ನಾಟಕ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ.

ವ್ಯಾಕ್ಸಿನೇಷನ್ ವ್ಯಾಪ್ತಿಯಲ್ಲಿ ಹಿಂದುಳಿದಿರುವ 23 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಸುಧಾಕರ್, " ಈ ತಿಂಗಳ ಅಂತ್ಯದ ವೇಳೆಗೆ ಈ 23 ಜಿಲ್ಲಾ ಆಡಳಿತಗಳಿಗೆ ಲಸಿಕೆ ವ್ಯಾಪ್ತಿಯನ್ನು ವೇಗಗೊಳಿಸಲು ಮತ್ತು ಮೊದಲ ಡೋಸ್ ಅನ್ನು ಪೂರ್ಣಗೊಳಿಸುವ ಗುರಿ ನೀಡಲಾಗಿದೆ ಎಂದರು.

ನವೆಂಬರ್‌ ವೇಳೆಗೆ ಎಲ್ಲ ಡೋಸ್‌ಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸುಧಾಕರ್ ಹೇಳಿದರು.

ಪರೀಕ್ಷೆಯ ಪ್ರಗತಿ ಮತ್ತು ಸಾಧನೆ, ಆಮ್ಲಜನಕ ಸ್ಥಾವರಗಳ ಸ್ಥಾಪನೆ ಮತ್ತು ಇತರ ನಾಗರಿಕ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅವರು ಹೇಳಿದರು.

ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳ ಹೊರತಾಗಿಯೂ ಕಳೆದ ವರ್ಷವೂ ರಾಜ್ಯ ಸರ್ಕಾರ ಗಣೇಶ ಹಬ್ಬವನ್ನು ಆಚರಿಸಲು ಅನುಮತಿ ನೀಡಿರುವುದನ್ನು ಉಲ್ಲೇಖಿಸಿದ ಸಚಿವರು, "ಈ ವರ್ಷ ನಾವು 0.7 ರಷ್ಟು ಪಾಸಿಟಿವ್ ದರ ಹೊಂದಿದ್ದೇವೆ ಮತ್ತು ವಿಶೇಷವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದರು.

"ನಾವು ಜಿಲ್ಲಾವಾರು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಮತ್ತು ಪಾಸಿಟಿವಿಟಿ ಪ್ರಮಾಣ ಶೇಕಡಾ 2 ಕ್ಕಿಂತ ಹೆಚ್ಚು ಇರುವಲ್ಲಿ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡುತ್ತೇವೆ "ಎಂದು ಅವರ ಆರೋಗ್ಯ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

SCROLL FOR NEXT