ರಾಜ್ಯ

ಕೋವಿಡ್‌-19: ಖಾಸಗಿ ಆಸ್ಪತ್ರೆಗಳ ದರ ನಿಗದಿ ಬಗ್ಗೆ ಪ್ರಚಾರ ಅಗತ್ಯ- ಹೈಕೋರ್ಟ್

Lingaraj Badiger

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳ ಚಿಕಿತ್ಸೆಯ ದರಗಳನ್ನು ಜನರಿಗೆ ಬಹಿರಂಗಪಡಿಸಲು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

ಕೋವಿಡ್ -19  ಸಮಸ್ಯೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಬ್ಯಾನರ್‌ಗಳನ್ನು ಅಂಟಿಸುವ ಮೂಲಕ ಪ್ರಚಾರ ನೀಡಿದರೆ ಉತ್ತಮ ಎಂಬ ಸಲಹೆ ನೀಡಿತು.

ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿಂದಾಗಿ, ಕೆಲವು ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ನಿಗದಿಪಡಿಸುತ್ತಿವೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

‘ದರ ಪಟ್ಟಿ ಬಗ್ಗೆ ಪ್ರಚಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

‘ಗೌರಿ ಗಣೇಶ ಹಬ್ಬ ಆಚರಣೆ ವಿಷಯದಲ್ಲಿ ತಜ್ಞರು ನೀಡಿರುವ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಕೇರಳದಿಂದ ಬರುವ ಪ್ರಯಾಣಿಕರ ವಿಷಯದಲ್ಲೂ ನಿಗಾ ವಹಿಸಲಾಗುತ್ತಿದೆ’ ಎಂದು ಸರ್ಕಾರದ ಪರ ವಕೀಲರು ವಿವರಿಸಿದರು.

‘ಬೆಂಗಳೂರಿನಲ್ಲಿ ವಾರ್ಡ್ ಮಟ್ಟದ ಎಲ್ಲಾ ಅಧಿಕಾರಿಗಳೂ ಕೋವಿಡ್ ಕುರಿತ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಪೀಠ ಹೇಳಿದೆ.

SCROLL FOR NEXT