ರಾಜ್ಯ

ರಾಜ್ಯ ಹೈಕೋರ್ಟ್ 10 ನ್ಯಾಯಮೂರ್ತಿಗಳ ಸೇವೆ ಖಾಯಂ

Srinivasamurthy VN

ಬೆಂಗಳೂರು: ರಾಜ್ಯ ಹೈಕೋರ್ಟ್ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ 10 ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಧಿಸೂಚನೆ ಹೊರಡಿಸಿದೆ.

ನ್ಯಾಯಮೂರ್ತಿ ಮರಲೂರ್ ಇಂದ್ರಕುಮಾರ್ ಅರುಣ್, ನ್ಯಾ.ಇಂಗಲಗುಪ್ಪೆ ಸೀತಾರಾಮಯ್ಯ ಇಂದ್ರೇಶ್, ನ್ಯಾ.ರವಿ ವೆಂಕಪ್ಪ ಹೊಸಮನಿ, ನ್ಯಾ.ಸವಣೂರು ವಿಶ್ವಜಿತ್ ಶೆಟ್ಟಿ, ನ್ಯಾ. ಶಿವಶಂಕರ್ ಅಮರಣ್ಣನವರ್, ನ್ಯಾ.ಎಂ.ಗಣೇಶಯ್ಯ ಉಮಾ, ನ್ಯಾ.ವೇದವ್ಯಾಸಾಚಾರ್ ಶ್ರೀಶಾನಂದ, ನ್ಯಾ.ಹಂಚಟೆ ಸಂಜೀವ್  ಕುಮಾರ್, ನ್ಯಾ.ಪದ್ಮರಾಜ್ ನೇಮಚಂದ್ರ ದೇಸಾಯಿ ಹಾಗೂ ನ್ಯಾ.ಪಿ.ಕೃಷ್ಣ ಭಟ್ ಅವರನ್ನು ಖಾಯಂ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ.

ಈ ಹಿಂದೆ ರಾಜ್ಯ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ.ಎಸ್.ಓಕ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರುಗಳನ್ನು ಸುಪ್ರೀಂ ಕೋರ್ಟ್ ಗೆ ಬಡ್ತಿ ನೀಡಿ ಕೊಲಿಜಿಯಂ ಶಿಫಾರಸ್ ಮಾಡಿತ್ತು. ಅವರಿಬ್ಬರು ಇತ್ತಿಚೆಗಷ್ಟೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕನ್ನಡಿಗರಾದ ಬಿ. ವಿ. ನಾಗರತ್ನ ಅವರು ಆಗಸ್ಟ್  31ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸೇವಾ ಹಿರಿತನದ ಆಧಾರದ ಮೇಲೆ ಸೆಪ್ಟೆಂಬರ್ 2027ರಲ್ಲಿ ಅವರು ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶವಿದೆ.

ಸೆಪ್ಟೆಂಬರ್‌ನಲ್ಲಿ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಕೊಲಿಜಿಯಂ ಕರ್ನಾಟಕದ 6 ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು 12 ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಲು ಶಿಫಾರಸು ಮಾಡಿತ್ತು. ಇವರಲ್ಲಿ ಇಬ್ಬರು ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾರೆ.

ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡುವತ್ತ ಗಮನಹರಿಸಿದೆ. ದೇಶದ 25 ಹೈಕೋರ್ಟ್‌ಗಳಲ್ಲಿ ಸುಮಾರು 450 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ ಕೆಲವು ದಿನಗಳ ಹಿಂದೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜು ಭೇಟಿಯಾಗಿದ್ದರು. ದೇಶದ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡುವುದು ತಮ್ಮ ಆದ್ಯತೆ ಎಂದು ಹೇಳಿದ್ದರು.

ಸೆಪ್ಟೆಂಬರ್ ತಿಂಗಳಿನಲ್ಲಿ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ಶೇ 90ರಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ತಮ್ಮ ಮಾತಿನಂತೆ ಮುಖ್ಯ ನ್ಯಾಯಮೂರ್ತಿಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದಾರೆ.

SCROLL FOR NEXT