ರಾಜ್ಯ

ಸಿಲಬಸ್ ಮುಗಿಸಲು ಶಿಕ್ಷಕರ ರಜೆ ಕಡಿತ; 1 ರಿಂದ 5ನೇ ತರಗತಿ ಪ್ರಾರಂಭಿಸಲು ಶೀಘ್ರ ನಿರ್ಧಾರ- ಸಚಿವ ನಾಗೇಶ್ 

Manjula VN

ಶಿವಮೊಗ್ಗ: ಪ್ರಾಥಮಿಕ ಶಾಲೆಯ 1ರಿಂದ 5ನೇ ತರಗತಿಗಳನ್ನು ಪುನಾರಂಭಿಸುವ ಬಗ್ಗೆ ಶೀಘ್ರದಲ್ಲಿಯೇ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಪಡೆದು ತೀರ್ಮಾನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​​ ಅವರು ಶನಿವಾರ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರಗತಿಗಳು ಪುನರಾರಂಭ ಮಾಡುವ ಬಗ್ಗೆ ಸಮಿತಿಯ ಮುಂದೆ ವಿಷಯ ಮಂಡಿಸಲಾಗುತ್ತದೆ. ಈಗಾಗಲೇ 6ರಿಂದ 9ನೇ ತರಗತಿಗಳನ್ನು ನಮ್ಮ ಶಿಕ್ಷಕರು ಯಶಸ್ವಿಯಾಗಿ ನಡೆಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. 

ತರಗತಿಗಳಲ್ಲಿ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ಮಾಡಲಾಗುತ್ತಿದೆ. ಪಠ್ಯಕ್ರಮ ಪೂರ್ಣ ಮಾಡುವುದರಿಂದ ಮಕ್ಕಳಿಗೆ ಲಾಭವಾಗುತ್ತದೆ. ಈಗಾಗಲೇ ಮಕ್ಕಳು ಸಾಕಷ್ಟು ತರಗತಿಗಳನ್ನು ಕಳೆದುಕೊಂಡಿದ್ದಾರೆ. ಬ್ರಿಡ್ಜ್ ಕೋರ್ಸ್ ಹಾಗೂ ಮತ್ತೆ ಪಾಠ ಮಾಡಿದ್ದರೆ ಮುಂದೆ ಸಮಸ್ಯೆ ಆಗುತ್ತದೆ. ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.‌ ರಜೆ ಕಡಿಮೆ ಮಾಡಿ ಇನ್ನಷ್ಟು ತರಗತಿ ನಡೆಸಬಹುದೇ ಎಂಬುದರ ಕುರಿತು ಚಿಂತನೆಗಳು ನಡೆಯುತ್ತಿವೆ. ಇದು ಚಿಂತನೆಯಷ್ಟೇ, ಈ ಬಗ್ಗೆ ಯಾವುದೇ ತೀರ್ಮಾನ, ಚರ್ಚೆ ನಡೆದಿಲ್ಲ. ಶಿಕ್ಷಕರ ಸಹಕಾರ ತೆಗೆದುಕೊಂಡು ಮಾಡುವ ಯೋಚನೆ ಇದೆ. ಅವಶ್ಯಕತೆ ಬಿದ್ದರೆ ಪಠ್ಯಕ್ರಮ ಕಡಿಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಶಿಕ್ಷಕರ ವರ್ಗಾವಣೆಗೆ ನ್ಯಾಯಾಲಯದಿಂದ​​ ತಡೆಯಾಜ್ಞೆ ಇದೆ. ಇದನ್ನು ಶಿಕ್ಷಕರು ಯಾಕೆ‌ ಮಾಡಿದ್ದಾರೆ ಎಂಬುದು ಗೊತ್ತಿಲ್ಲ, ಅನೇಕರಿಗೆ ಸಮಸ್ಯೆಯಾಗಿದೆ. ಅವಶ್ಯವಿದ್ದರೆ ನ್ಯಾಯಾಲಯದ ಮೂಲಕವೇ ತಡೆಯಾಜ್ಞೆ ತೆರವು ಮಾಡಲಾಗುವುದು ಎಂದಿದ್ದಾರೆ.

ಇದೇ ವೇಳೆ ಕೋವಿಡ್ ಕುರಿತು ಮಾತನಾಡಿದ ಅವರು, ನೆರೆಯ ರಾಜ್ಯವಾದ  ಕೇರಳದಲ್ಲಿ ಕೋವಿಡ್​ ಸೋಂಕು ಹೆಚ್ಚುತ್ತಿದೆ. ಆದರೆ, ನಮ್ಮ ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಡಿಮೆ ಆಗುತ್ತಿದೆ. ಕೊರೋನಾ ಹೆಚ್ಚಾದರೆ, ಈಗಾಗಲೇ ತೆರೆದಿರುವ ಶಾಲೆಗಳನ್ನು ಮುಚ್ಚುವ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

SCROLL FOR NEXT