ರಾಜ್ಯ

ದೇವಾಲಯಗಳನ್ನು ಒಡೆಯಲು ಮೂಲ ಕಾರಣ ಬಿಜೆಪಿ ಸರ್ಕಾರವೇ: ಹೆಚ್ ಡಿ ಕುಮಾರಸ್ವಾಮಿ ಆರೋಪ 

Sumana Upadhyaya

ಬೆಂಗಳೂರು: ಸುಪ್ರೀಂ ಕೋರ್ಟ್ ನ ತೀರ್ಪಿನ ಕಾರಣವೊಡ್ಡಿ ರಾಜ್ಯದಲ್ಲಿ ಸುಮಾರು 93 ದೇವಾಲಯಗಳನ್ನು ಒಡೆಯುವ ಜಿಲ್ಲಾಡಳಿತಗಳ ತೀರ್ಮಾನಕ್ಕೆ ರಾಜ್ಯದ ಬಿಜೆಪಿ ಸರ್ಕಾರವೇ ಮೂಲ ಕಾರಣ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ ಜಾಗರಣ ಸಮಿತಿಯ ಹೆಸರಿನಲ್ಲಿ ಪ್ರತಿಭಟನೆ ಆರಂಭವಾಗಿರುವುದು ಅದು ಬಿಜೆಪಿಯ ಭಾಗವೇ. ಹಿಂದೂ ಧರ್ಮ ಮತ್ತು ಹಿಂದೂ ಧರ್ಮೀಯರ ರಕ್ಷಣೆಯ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವೇ ಕೇಂದ್ರ ಮತ್ತು ರಾಜ್ಯದಲ್ಲಿ ಇಂದು ಇವೆ. ಜಿಲ್ಲಾಡಳಿತದ ಅಧಿಕಾರ ಸರ್ಕಾರದ ಪರಿಗಣನೆಗೆ ತಂದೇ ಆಡಳಿತ ನಡೆಸುವುದು. ಒಂದು ಕಡೆ ಬಿಜೆಪಿಯ ಅಂಗವಾಗಿರುವ ಹಿಂದೂ ಜಾಗರಣ ವೇದಿಕೆ ದೇವಾಲಯಗಳನ್ನು ಒಡೆಯುವುದನ್ನು ನಿಲ್ಲಿಸಬೇಕು ಎನ್ನುತ್ತಿವೆ, ಇನ್ನೊಂದೆಡೆ ಜಿಲ್ಲಾಡಳಿತ ಸುಪ್ರೀಂ ಕೋರ್ಟ್ ಆದೇಶ ಎಂದು ಕೆಡವಲು ಮುಂದಾಗಿರುವುದು ಯಾವ ನಿಲುವನ್ನು ತೋರಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ದೇವಾಲಯವನ್ನು ಕೆಡವಲಾಗಿದೆ. ಸರ್ಕಾರ ಮನಸ್ಸು ಮಾಡಿದ್ದರೆ ಒಂದು ನಿಮಿಷಯದಲ್ಲಿ ಅದನ್ನು ನಿಲ್ಲಿಸಬಹುದಾಗಿತ್ತು.ಅಧಿಕಾರಿಗಳು ಸರ್ಕಾರದ ಸುಪರ್ದಿಯಲ್ಲಿರುವವರು, ಹಿಂದುತ್ವದ ಹೆಸರಿನಲ್ಲಿ ಇಡೀ ದೇಶವನ್ನು ಆಳಲು ಹೊರಟಿರುವಂತಹ ಬಿಜೆಪಿ ಸರ್ಕಾರ ಇಂದು ಕರ್ನಾಟಕದಲ್ಲಿ ಹಿಂದೂ ದೇವಾಲಯಗಳನ್ನು ಒಡೆದಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಬಿಜೆಪಿ ಸರ್ಕಾರವೇ ಎಂದು ಆರೋಪಿಸಿದರು.

ಇದುವರೆಗೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿಂದ ಬಂದಿರುವ ತೀರ್ಪುಗಳನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದಾರೆಯೇ, ಹಲವಾರು ಘಟನೆಗಳಲ್ಲಿ ಕೋರ್ಟ್ ತೀರ್ಪು ಬಂದಾಗಲೂ ರಕ್ಷಣೆ ನೀಡಿದ್ದರು. ಹಾಗಿರುವಾಗ ದೇವಾಲಯ ಒಡೆಯುವುದಕ್ಕೆ ರಕ್ಷಣೆಯನ್ನು ಸರ್ಕಾರಕ್ಕೆ ಕೊಡಲು ಸಾಧ್ಯವಿರಲಿಲ್ಲವೇ, ಇವತ್ತು ದೇವಾಲಯಗಳನ್ನು ಒಡೆಯಲು ಸರ್ಕಾರವೇ ಕಾರಣ ಎಂದು ಆಪಾದಿಸಿದರು.

ರಾಜ್ಯದ ಜನತೆಯಿಂದ ಸಮಸ್ಯೆಗಳ ಬಗ್ಗೆ, ಮುಖ್ಯ ವಿಷಯಗಳಿಂದ ಗಮನ ಬೇರೆಡೆ ಹರಿಸಲು ಬಿಜೆಪಿ ನಡೆಸುತ್ತಿರುವ ಕುತಂತ್ರವಿದು. ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ಜನರ ಜೊತೆ ಆಟವಾಡುವುದು ಬಿಟ್ಟು ದೇವಾಲಯ ಕೆಡವಿಕೆ ವಿಚಾರದಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ಇನ್ನು ಅವರ ಸೋದರ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಂಜನಗೂಡು ಒಂದು ಐತಿಹಾಸಿಕ ತಾಣಗಳ ಜಾಗ. ಯಾವುದೇ ದೇವಸ್ಥಾನವನ್ನೂ ಅಲ್ಲಿ ಒಡೆಯಬಾರದು. ದೇವಸ್ಥಾನ ಒಡೆಯುವುದು ತಪ್ಪು, ಇದರ ಹಿಂದೆ ಯಾರೋ ಇದ್ದಾರೆ. ಬಿಜೆಪಿ ಸರ್ಕಾರ ನಮ್ಮದು ಹಿಂದೂಗಳ ಸರ್ಕಾರ ಅಂತಾ ಹೇಳುತ್ತೆ. ಆದರೂ ಬಿಜೆಪಿ ಸರ್ಕಾರದಲ್ಲೇ ದೇವಸ್ಥಾನ ಒಡೆಯುತ್ತಿರೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ. 

SCROLL FOR NEXT