ರಾಜ್ಯ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವೆಂಕೋಸಾ ಭಾಂಡಗೆ ನಿಧನ

Lingaraj Badiger

ಗದಗ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ, ವೆಂಕೋಸಾ ಭಾಂಡಗೆ ಅವರು ಸೋಮವಾರ ಬೆಳಗ್ಗೆ ಅವರ ನಿವಾಸದಲ್ಲಿ ನಿಧನರಾದರು. 105 ವರ್ಷದ ಭಾಂಡಗೆ ಅವರು ಮೂವರು ಪುತ್ರರು ಮತ್ತು ಐದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ವೆಂಕೋಸಾ ಜನವರಿ 20, 1916 ರಂದು ಗಜೇಂದ್ರಗಡದಲ್ಲಿ ಜನಿಸಿದರು ಮತ್ತು ಗದಗ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. 

ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಭಾಂಡಗೆ ಅವರು 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಅವರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಆರು ತಿಂಗಳು ಕಳೆದರು. ಆ ದಿನಗಳಲ್ಲಿ, ಗಾಂಧೀಜಿ ಜೈಲಿಗೆ ಭೇಟಿ ನೀಡಿದರು ಮತ್ತು ಹಿಂಡಲಗಾ ಜೈಲಿನಲ್ಲಿ ಅವರಿಗೆ ನೈತಿಕ ಬೆಂಬಲ ನೀಡಿದರು. ಆರು ತಿಂಗಳ ನಂತರ, ವೆಂಕೋಸಾ ಭಾಂಡಗೆ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು 200 ರೂಪಾಯಿ ದಂಡ ಪಾವತಿಸಿ ಜೈಲಿನಿಂದ ಬಿಡುಗಡೆಯಾಗಿದ್ದರು.

ವೆಂಕೋಸಾ ಭಾಂಡಗೆ ಅವರಿಗೆ ಕೊರೋನಾ ಮೊದಲ ಅಲೆಯಲ್ಲಿ ಸೋಂಕು ತಗುಲಿತ್ತು. ಕೋವಿಡ್ ಗೆದ್ದು ಬಂದ ನಂತರ ತಮ್ಮ ಮನೆಯ ಪ್ರವೇಶದ್ವಾರದಲ್ಲಿ ಭಾರತೀಯ ಧ್ವಜ ಪ್ರದರ್ಶಿಸಿದ್ದರು ಮತ್ತು ಯಾವುದೇ ಭಯವಿಲ್ಲದೆ ಕೋವಿಡ್ ಪರೀಕ್ಷೆ ಮಾಸಿಕೊಳ್ಳುವಂತೆ ಯುವಕರಿಗೆ ಸಂದೇಶವನ್ನು ನೀಡಿದ್ದರು. 

ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಎನ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ತಾಲೂಕು ಆಡಳಿತ ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರನ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. 

ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಪಟ್ಟಣದ ಕುಷ್ಟಗಿ ರಸ್ತೆಯ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

SCROLL FOR NEXT