ರಾಜ್ಯ

ಬೆಂಗಳೂರು: ಹೋಟೆಲ್ ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರೀ ಅನಾಹುತ

Nagaraja AB

ಬೆಂಗಳೂರು: ನಗರದ ಟ್ರಿನಿಟಿ ಸರ್ಕಲ್ ಬಳಿಯ ಅಜಂತಾ ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಎರಡು ಮಹಡಿಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. 

ಸೋಮವಾರ ರಾತ್ರಿ‌ 10:30ರ ಸುಮಾರಿಗೆ ದಟ್ಟ ಹೊಗೆ ಆವರಿಸಿದ್ದು, ಉಸಿರಾಡಲಾಗದೇ ಹೋಟೆಲ್​​ ಸಿಬ್ಬಂದಿ ಎರಡನೇ ಮಹಡಿಯಿಂದ ಜಿಗಿದಿದ್ದಾರೆ. ವಿಷಯ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಅಪಾಯದಲ್ಲಿ ಸಿಲುಕಿದ್ದ ಐವರು ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗೇಶ್, ಮಹೇಂದ್ರ, ಸತ್ಯಪ್ರಕಾಶ್, ದಿನೇಶ್, ಅಭಿಷೇಕ್, ರಾಚಪ್ಪಜಿ ಮತ್ತು ಶೇಖರ್ ಅವರನ್ನು ರಕ್ಷಣೆ ಮಾಡಲಾಗಿದೆ. ಇಬ್ಬರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಪಾರ್ಕಿಂಗ್ ಲಾಟ್ ನಲ್ಲಿದ್ದ ಒಂದು ಆಟೋ, ಒಂದು ಜೀಪ್ ಸುಟ್ಟು ಕರಕಲಾಗಿದೆ. 

ಕಣ್ಣು ಮುಚ್ಚಿ ಕಣ್ಣು ತೆಗೆಯುತ್ತಿದ್ದಂತೆ ಹೋಟೆಲ್​ನ ರಿಸಪ್ಷನ್​ ಸ್ಥಳ ಹೊತ್ತಿ ಉರಿದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ.

ಈ ಕುರಿತು ಡಿಸಿಪಿ ಶರಣಪ್ಪ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಹೋಟೆಲಿನ ಕೆಳಗಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 10:30ಕ್ಕೆ ಹೋಟಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್‍ನಲ್ಲಿ ಐವರಿದ್ದು, 5 ಜನರನ್ನೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಐವರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕಾರಣ ಪತ್ತೆಮಾಡಲಿದ್ದಾರೆ ಎಂದು ತಿಳಿಸಿದರು.

ಹೋಟಲ್ ಕಿಟಿಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ರಾಚಪ್ಪಜಿ ಮತ್ತು ಶೇಖರ್ ಹೇಳಿಕೆ ನೀಡಿದ್ದಾರೆ.

ರಾತ್ರಿ ಸುಮಾರು 10:15ಕ್ಕೆ ಹೋಟಲ್ ಗೆ ಬಂದೆವು. ಊಟ ಮಾಡಿ, ಟಿವಿ ನೋಡುತ್ತಿರಬೇಕಾದರೆ ನಮ್ಮ ಡ್ರೈವರ್ ಬಂದು ಬೆಂಕಿ ಬಿದ್ದಿದೆ ಎಂದು ಹೇಳಿದರು. ಹೊರ ಬರಲು ಕಾರಿಡಾರ್ ಗೆ ಬಂದೇವು. ಅಷ್ಟೋತ್ತಿಗೆ ಎರಡನೇ ಮಹಡಿಯಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ಬೆಂಕಿ ಹೆಚ್ಚಾಗುತ್ತಿತ್ತು, ತಕ್ಷಣವೇ ರೂಮ್ ಕಿಟಿಕಿ ಒಡೆದು ಅಲ್ಲಿಂದ ಜಿಗಿದು ಪ್ರಾಣ ಉಳಿಸಿಕೊಂಡೆವು ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹಲಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT