ರಾಜ್ಯ

ನಮ್ಮ ಮೆಟ್ರೋ ಆಸನದ ಮೇಲೆ ಸ್ಟಿಕರ್ ತೆಗೆಯದ ಸಿಬ್ಬಂದಿಗಳು: ಪ್ರಯಾಣಿಕರು ಗೊಂದಲದಲ್ಲಿ!

Manjula VN

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿ, ಬಹುತೇಕ ಎಲ್ಲವೂ ಸ್ಥಿತಿಗೆ ಬಂದಿದ್ದರೂ ಕೆಲವೊಂದು ನಿಯಮಗಳನ್ನು ಬಿಎಂಆರ್'ಸಿಎಲ್ ಸಡಿಲಿಸಿಲ್ಲ. 

ನಮ್ಮ ಮೆಟ್ರೋದಲ್ಲಿ ಶೇ.100ರಷ್ಟು ಆಸನ ಸಾಮರ್ಥ್ಯದೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಆದರೆ, ಈ ಹಿಂದೆ ಅಂತರ ಕಾಪಾಡುವಂತೆ ಆಸನಗಳ ಮೇಲೆ ಅಂಟಿಸಲಾಗಿರುವ ಸ್ಟಿಕರ್ ಗಳನ್ನು ಇನ್ನೂ ತೆಗೆದುಹಾಕಿಲ್ಲ. ಹೀಗಾಗಿ ಪ್ರಯಾಣಿಕರಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. 

ಯಲಚೇನಹಳ್ಳಿ– ಸಿಲ್ಕ್‌ ಇನ್‌ಸ್ಟಿಟ್ಯೂಟ್ ವಿಸ್ತರಿತ ಮಾರ್ಗದ ನಮ್ಮ ಮೆಟ್ರೋ ರೈಲಿಗಳಲ್ಲಿ ಈ ಪರಿಸ್ಥಿತಿ ಕಂಡು ಬಂದಿದೆ. ಈ ಕುರಿತು ಎಲೆಕ್ಟ್ರಿಕಲ್ ಇಂಜಿನಿಯರ್ ವಿ.ಸುಬ್ರಮಣ್ಯ ಅವರು ಮಾತನಾಡಿ, ಖಂಡಿತವಾಗಿಯೂ ನಾನು ಸಾಮಾಜಿಕ ಅಂತರವನ್ನು ಕಾಪಾಡುತ್ತಿನೆ. ರೈಲಿನಲ್ಲಿ ಸ್ಟಿಕರ್ ನೋಡಿದ ಕೂಡಲೇ ಆ ಸ್ಥಳದಲ್ಲಿ ಕುಳಿತುಕೊಳ್ಳುವುದಿಲ್ಲ. ಇದು ನಮ್ಮ ಸುರಕ್ಷತೆಯನ್ನು ಕಾಪಾಡುತ್ತದೆ. ಈ ನಿಯಮವನ್ನು ಸಡಿಸಲಾಗಿದೆ ಎಂದು ಹೇಳಿದರೂ ಕೂಡ, ಸ್ಟಿಕರ್ ತೆಗೆಯದಿರುವುದು ನಿಯಮವಿದೆ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ. 

ಮತ್ತೊಂದು ರೈಲಿನಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರೂ ಡು ನಾಟ್ ಸಿಟ್ ಸೀಟ್ ನಲ್ಲಿ ಕುಳಿತುಕೊಂಡಿದ್ದಾರೆ. ಈ ವೇಳೆ ಪಕ್ಕದ ಆಸನಗಳಲ್ಲಿ ಕುಳಿತಿದ್ದ ಇಬ್ಬರು ಯುವತಿಯವರು ಆ ಸೀಟಿನಲ್ಲಿ ಕುಳಿತುಕೊಳ್ಳಬಾರದು ಎಂದು ಹೇಳಿದ್ದಾರೆ. ಈ ವೇಳೆ ಮಹಿಳೆ ಆ ನಿಯಮವನ್ನು ಸಡಿಲಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಮಹಿಳೆ ಮಾತನ್ನು ಕೇಳದ ಹಿನ್ನೆಲೆಯಲ್ಲಿ ಯುವತಿಯವರು ಸುರಕ್ಷತಾ ದೃಷ್ಟಿಯಿಂದ ತಾವೇ ಎದ್ದು ನಿಂತು ರೈಲಿನಲ್ಲಿ ಪ್ರಯಾಣಿಸಿದ ಘಟನೆಯೂ ನಡೆದಿದೆ ಎಂದು ಶ್ರೇಯಾ ವಿ.ಕಶ್ಯಪ್ ಎಂಬ ವಿದ್ಯಾರ್ಥಿನಿ ಈ ಕುರಿತ ಘಟನೆಯೊಂದನ್ನು ವಿವರಿಸಿದ್ದಾರೆ. 

ಇನ್ನು ಕೆಲವು ರೈಲುಗಳಲ್ಲಿ ಕೆಲವರು ಆಸನಗಳಲ್ಲಿ ಕುಳಿತುಕೊಂಡು ಸ್ಟಿಕರ್ ಅಂಟಿಸಿದ್ದ ಆಸನಗಳಲ್ಲಿ ತಮ್ಮ ಲಗೇಜ್, ಲ್ಯಾಪ್ ಟಾಪ್ ಗಳನ್ನು ಇರಿಸಿಕೊಂಡು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. 

ಸರ್ಕಾರಿ ನೌಕರ ರಾಕೇಶ್ ಪಾಟೀಲ್ ಎಂಬುವವರು ಮೆಟ್ರೋ ರೈಲಿನಲ್ಲಿ ನಿಂತು ಪ್ರಯಾಣಿಸುತ್ತಿರುವುದು ಕಂಡು ಬಂದಿತ್ತು. ಈ ವೇಳೆ ವಿಚಾರಿಸಿದಾಗ, ನಿಯಮ ಸಡಿಲಗೊಂಡಿರುವುದು ನನಗೆ ಗೊತ್ತಿದೆ. ಆದರೆ ಕೆಲ ಅಧಿಕಾರಿಗಳು ನಿಯಮ ಉಲ್ಲಂಘಿಸಲಾಗಿದೆ ಎಂದು ಹೇಳಿ ಪ್ರಯಾಣಿಕರಿಗೆ ದಂಡ ವಿಧಿಸುತ್ತಾರೆ. ಈ ಕುರಿತು ಭಯವಿದೆ. ಹೀಗಾಗಿ ಸ್ಟಿಕರ್ ಇರುವ ಸೀಟುಗಳಲ್ಲಿ ಕುಳಿತುಕೊಳ್ಳುವುದನ್ನು ನಿಯಂತ್ರಿಸುತ್ತೇನೆಂದು ಹೇಳಿದ್ದಾರೆ. 

ಮತ್ತೊಬ್ಬ ಪ್ರಯಾಣಿಕರಾಗಿರುವ ಎಸ್.ಪವಿತ್ರ ಎಂಬುವವರು ಮಾತನಾಡಿ, ನಮ್ಮ ಮೆಟ್ರೋ ಅಧಿಕಾರಿಗಳು ರೈಲಿನಲ್ಲಿ ಈ ಕುರಿತು ಮಾಹಿತಿಗಳನ್ನು ನೀಡಬೇಕು. ಸ್ಟಿಕರ್ ಗಳಿರುವ ಹಿನ್ನೆಲೆಯಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ಎಲ್ಲಾ ಆಸನಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ. 

SCROLL FOR NEXT