ರಾಜ್ಯ

ಸಾಲ ಕೊಡದ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ…!!

Srinivas Rao BV

ಬೆಂಗಳೂರು: ನಾಡು ಕಂಡ ಹಿರಿಯ ಮುತ್ಸದ್ದಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕಳೆದ ಎರಡು ವರ್ಷಗಳಿಂದ ಹಿಂದುಳಿದವರಿಗೆ ಸಾಲ ಸೌಲಭ್ಯ ನೀಡದಿರುವ ವಿಷಯ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆಗೆ ಕಾರಣವಾಗಿ ಮಾತಿನ ಚಕಮಕಿ ಜರುಗಿತು.

ಚಿಂತಾಮಣಿ ಶಾಸಕ ಕೃಷ್ಣ ರೆಡ್ಡಿ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಸರ್ಕಾರ ಯಾರ ಪರ ಕೆಲಸ ಮಾಡುತ್ತಿದೆ. ಅರಸು ನಿಗಮದ ಧ್ಯೇಯ ಮತ್ತು ಉದ್ದೇಶ ಏನು ? ಈ ರೀತಿ ನಿರ್ಲಕ್ಷಿಸುವುದಾದರೆ ನಿಗಮ ಯಾಕಿರಬೇಕು ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲರಾಗಿ ಅರಸು ಅವರಿಗೆ ಈ ರೀತಿ ಸರ್ಕಾವೇ ಅಪಮಾನ ಮತ್ತು ನಿರ್ಲಕ್ಷ್ಯ ಮಾಡುವುದಾದರೆ ಶಾಸಕರಾಗಿ ನಾವು ಹೇಗೆ ಜನರಿಗೆ ಮುಖ ತೋರಿಸಬೇಕು. 

ಸಾಲಸೌಲಭ್ಯಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಹಣವನ್ನೇ ನೀಡುವುದಿಲ್ಲ. ಗ್ರಾಮೀಣ ಭಾಗದಲ್ಲಿ ಶಾಸಕರ ಪರಿಸ್ಥಿತಿ ಏನಾಗುತ್ತದೆ ಯೋಚಿಸಿ ಎಂದರು. ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳ ಮನೆಗೆ ಹೋಗಿ ಯಾರು ಕೇಳುವುದಿಲ್ಲ. ಶಾಸಕರ ಮನೆಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಈ ಸುಖಕ್ಕೆ ನಾವು ಶಾಸಕರಾಗಿ ಪ್ರಯೋಜನವೇನು ಎಂದು ಅಸಮಾಧಾನ ಹೊರಹಾಕಿದರು.

ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ನಿಗಮದ ಅಧ್ಯಕ್ಷನಾಗಿದ್ದೆ. ಹಿಂದುಳಿದವರ ಅಭಿವೃದ್ಧಿಗಾಗಿ 250 ಕೋಟಿ ರೂಪಾಯಿ ಸಾಲ ಸೌಲಭ್ಯ ಕಲ್ಪಿಸಲಾಗಿತ್ತು. ಈಗಿನ ಸರ್ಕಾರಕ್ಕೆ ಏನಾಗಿದೆ. ಯಾಕೆ ಹಣ ಬಿಡುಗಡೆ ಮಾಡಲಿಲ್ಲ. ಇದೇನಾ ಸಾಮಾಜಿಕ ನ್ಯಾಯ ಎಂದರು.

ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ 2019-2020, 2020-2021ರ ಸಾಲಿಗೆ ಈಗಾಗಲೇ ಅನುದಾನ ಮಂಜೂರು ಮಾಡಲಾಗಿದೆ. 2019-2020ನೇ ಸಾಲಿನಲ್ಲಿ 250 ಕೋಟಿ ರೂಪಾಯಿ ಪೈಕಿ 165 ಕೋಟಿ ರೂಪಾಯಿ ಹಾಗೂ 2020-2021ನೇ ಸಾಲಿನಲ್ಲಿ 127 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಆದರೆ ಹೆಚ್ಚುವರಿ ವೆಚ್ಚವನ್ನು ಸಾಲ ಮರುಪಾವತಿ ಮತ್ತು ಹಿಂದಿನ ಸಾಲಿನ ಉಳಿಕೆ ಮೊತ್ತದಿಂದ ಭರಿಸಲಾಗಿದೆ. ಈಗ ಸರ್ಕಾರಕ್ಕೆ ಸದಸ್ಯರ ಭಾವನೆ ಅರ್ಥವಾಗಿದ್ದು ಮುಖ್ಯಮಂತ್ರಿ ಜತೆ ಮಾತನಾಡಿ ಹಣಕಾಸಿನ ಇತಿ-ಮಿತಿ ಅರಿತು ನಿಗಮಕ್ಕೆ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು. ಈ ಸಂದರ್ಭದಲ್ಲಿ ಕೆಲ ಸದಸ್ಯರು ಪಕ್ಷಬೇಧ ಮರೆತು ಮಾತಿನ ಚಕಮಕಿ, ವಾಗ್ವಾದದಲ್ಲಿ ನಿರತರಾದ ಪರಿಣಾಮ ಸದನದಲ್ಲಿ ಕೆಲ ಕಾಲ ಕೋಲಾಹಲದ ವಾತಾವರಣ ಏರ್ಪಟ್ಟಿತು.

SCROLL FOR NEXT