ರಾಜ್ಯ

ಶರಾವತಿ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಹೊಸ ಸಮೀಕ್ಷೆಗೆ ಸರ್ಕಾರ ಮುಂದು

Nagaraja AB

ಬೆಂಗಳೂರು: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಸರ್ಕಾರ ಹೊಸ ಸಮೀಕ್ಷೆ ನಡೆಸಲು ಮುಂದಾಗಿದೆ. ಜಿಲ್ಲಾಧಿಕಾರಿ, ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನು ನೇಮಿಸಿ, 3-5 ತಿಂಗಳೊಳಗಾಗಿ ಹೊಸ ಸಮೀಕ್ಷೆ ಮುಗಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶರಾವತಿ ಹಿನ್ನೀರಿನಿಂದ ಮುಳುಗಡೆಯಾದ ರೈತರ ಸಮಸ್ಯೆಗಳು, ಶರಾವತಿ ಅಭಯಾರಣ್ಯ, ಅರಣ್ಯ ಕಾಯ್ದೆ ಸಂಬಂಧ ವಿಧಾನ ಸೌಧದಲ್ಲಿ ಶಿವಮೊಗ್ಗ ಜಿಲ್ಲೆಯ ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ, ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿ ಸೂಚಿಸಿರುವಂತೆ ಅನುಸೂಚಿತ ಮೀಸಲು ಅರಣ್ಯ ಪ್ರದೇಶ ಡಿನೋಟಿಫಿಕೇಷನ್ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ ಎಂದರು. 

ಈ ಹಿಂದೆ ಮಾಜಿ ಮುಖ್ಯಮಂತ್ರಿ ರಚಿಸಿದ್ದ ಟಾಸ್ಕ್ ಫೋರ್ಸ್ ಕ್ರಿಯಾಶೀಲಗೊಳಿಸಲು ಟಾಸ್ಕ್ ಫೋರ್ಸ್ ಅಧಿಕಾರಿಗಳನ್ನು ನೇಮಿಸುವುದಾಗಿ ಹೇಳಿದ ಬೊಮ್ಮಾಯಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವ ಸಂಬಂಧ 1978ರ ಅರಣ್ಯ ಸಂರಕ್ಷಣೆ ಕಾಯ್ದೆ ಅನ್ವಯ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಲು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಾಜಿ ಸಿಎಂ ಹಾಗೂ ಶಿಕಾರಿಪುರ ಶಾಸಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ,ಶಿವಮೊಗ್ಗ ನಗರದ ಪ್ರಮುಖ ಭಾಗಗಳು ಸೇರಿದಂತೆ ಜನವಸತಿ ಹಾಗೂ ಸರ್ಕಾರಿ ಕಟ್ಟಡಗಳಿರುವ ಪ್ರದೇಶಗಳು ಅಭಯಾರಣ್ಯದ ವ್ಯಾಪ್ತಿಗೆ ಬರುತ್ತಿದ್ದು, ಗಡಿ ಪುನರ್ ನಿಗದಿಪಡಿಸುವುದರಿಂದ ಸಮಸ್ಯೆ ಬಗೆಹರಿಸಬಹುದು ಎಂದು ಸಲಹೆ ನೀಡಿದರು. ಶಿವಮೊಗ್ಗ, ಶಿಕಾರಿಪುರ –ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗದ ಅರಣ್ಯ ಇಲಾಖೆ ಯೋಜನೆಗಳ ಪ್ರಗತಿ ವೇಗ ಹೆಚ್ಚಿಸುವಂತೆ ಹೇಳಿದರು. 

ಈ ಬಗ್ಗೆ ಈಗಾಗಲೇ ಕ್ರಮ ಜರುಗಿಸಲಾಗಿದ್ದು, ವನ್ಯಜೀವಿ ಪ್ರದೇಶವನ್ನು ನಿಗದಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ,   ಗಡಿ ನಿಗದಿಪಡಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. ಅಲ್ಲದೇ, ಶಿವಮೊಗ್ಗ ಜಿಲ್ಲೆಗೆ ವಿಶೇಷ ಅರಣ್ಯ ಅಧಿಕಾರಿಗಳನ್ನು ನೇಮಿಸುವುದಾಗಿ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬಾರದ ಪರವಾನಗಿ ಹೊಂದಿರುವ ಕಲ್ಲು ಗಣಿಕಾರಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಸೂಚಿಸಿದರು. ವಾರದೊಳಗೆ ಸಾಧ್ಯವಿರುವಲ್ಲಿ ಕಲ್ಲು ಗಣಿಗಾರಿಕೆಯನ್ನು ಪ್ರಾರಂಭಿಸಲು ಅನುಮತಿ ನೀಡುವುದಾಗಿ ಹೇಳಿದರು.

ಸಂರಕ್ಷಿತ ಅರಣ್ಯಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು.ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಜನರಿಗೆ ಅನುಕೂಲ ಕಲ್ಪಿಸುವಂತೆ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಅರಣ್ಯ ಭೂಮಿ ಗುತ್ತಿಗೆ ನವೀಕರಣಕ್ಕೆ ಅರಣ್ಯ ಮತ್ತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಜರುಗಿಸುವಂತೆ ಸಿಎಂ ಬೊಮ್ಮಾಯಿ ತಿಳಿಸಿದರು.

SCROLL FOR NEXT