ರಾಜ್ಯ

ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ತೆರೆಯುವ ಗುರಿ: ಆರಗ ಜ್ಞಾನೇಂದ್ರ

Lingaraj Badiger

ಮೈಸೂರು: ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ತೆರೆಯುವ ಗುರಿ ಹೊಂದಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ೬ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್‌ಗಳ ನಿರ್ಗಮನ ಪಥಸಂಚಲನದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಗೃಹ ಸಚಿವರು, ಪ್ರತಿ ಪೊಲೀಸ್ ಠಾಣೆಯಲ್ಲೂ ಮೂವರು ಮಹಿಳಾ ಪೇದೆಯರು ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮುಂಬರುವ ವರ್ಷಗಳಲ್ಲಿ ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸಿಬ್ಬಂದಿ ಗೌರವಯುತವಾಗಿ ನಡೆದುಕೊಳ್ಳಬೇಕು, ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಶೀಘ್ರ ಜಾರಿಗೆ ತರಲಾಗುವುದು ಎಂದರು.

ಇದೇ ವೇಳೆ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

SCROLL FOR NEXT