ರಾಜ್ಯ

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಫೆಬ್ರವರಿಯಲ್ಲಿ ಹೂಡಿಕೆ ಸಮಾವೇಶ: ಸಚಿವ ಆನಂದ್ ಸಿಂಗ್

Shilpa D

ಬೆಂಗಳೂರು: 2025ರ ವೇಳೆಗೆ ಕರ್ನಾಟಕವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಹೊಂದುವ ಗುರಿ ಸಾಧಿಸಲು ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ಅನ್ನು ರೂಪಿಸಲಾಗಿದ್ದು, ಪ್ರೋತ್ಸಾಹ ಧನ, ರಿಯಾಯಿತಿಗಳನ್ನು ನೀಡಲು ಸರ್ಕಾರವು 500 ಕೋಟಿ ರು. ಕಾಯ್ದಿರಿಸಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ.

ಸೋಮವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಸಹಯೋಗದಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಕರ್ನಾಟಕ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಎಕ್ಸ್‌ಪೋ ಆಯೋಜಿಸಲಾಗುವುದು. ಮೂರು ದಿನಗಳ ಕಾಲ ನಡೆಯುವ ಹೂಡಿಕೆದಾರರ ಸಮ್ಮೇಳನದಲ್ಲಿ ದೊಡ್ಡ ಮೊತ್ತದ ಹೂಡಿಕೆ ಒಪ್ಪಂದಗಳನ್ನು ನಿರೀಕ್ಷಿಸಲಾಗಿದೆ’ ಎಂದರು.

ಈ ನೀತಿಯು ಐದು ಸಾವಿರ ಕೋಟಿ ರು.ನಷ್ಟುಹೂಡಿಕೆ ಮತ್ತು ಒಂದು ಮಿಲಿಯನ್‌ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. 17 ಸಾವಿರಕ್ಕೂ ಹೆಚ್ಚು ಪ್ರವಾಸೋದ್ಯಮ ಯೋಜನೆಗಳು ಮತ್ತು ಸೇವೆಗಳು ನೀತಿಯ ಲಾಭವನ್ನು ಪಡೆಯಲಿವೆ. ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ ಉತ್ಪನ್ನ ಕೊಡುಗೆಗಳು, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಪ್ರಚಾರದ ಅಂಶಗಳ ಮೇಲೆ ನೀತಿಯನ್ನು  ವಿನ್ಯಾಸಗೊಳಿಸಲಾಗಿದೆ. ಪ್ರವಾಸೋದ್ಯಮ ಯೋಜನೆಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಲು ಪ್ರವಾಸೋದ್ಯಮ ಹೂಡಿಕೆ ಸೌಲಭ್ಯದ ಕೋಶವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್‌ ಎರಡನೇ ಅಲೆಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಹೊಟೇಲ್‌ ಉದ್ಯಮ, ಗೈಡ್‌ಗಳು, ಸಿನಿಮಾ ಕ್ಷೇತ್ರ ಸೇರಿದಂತೆ ಇತರರಿಗೆ ಸರ್ಕಾರವು ಅಗತ್ಯ ನೆರವು ನೀಡಲು ಸಿದ್ಧವಿದೆ. ಸಿನಿಮಾ ರಂಗದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಏಕಗವಾಕ್ಷಿ ಪದ್ಧತಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಹೊಟೇಲ್‌, ರೆಸಾರ್ಟ್‌ ಆಸ್ತಿ ತೆರಿಗೆ ಶೇ.50ರಷ್ಟುಕಡಿತ ಮತ್ತು ಹೊಟೇಲ್‌ ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಏಪ್ರಿಲ್‌-ಜೂನ್‌ನಿಂದ ವಿದ್ಯುತ್‌ ಶುಲ್ಕವನ್ನು ಸಹ ಮನ್ನಾ ಮಾಡಲಾಗಿದೆ. ವ್ಯಾಪಾರ ಮತ್ತು ಸೌಲಭ್ಯಗಳನ್ನು ಉತ್ತೇಜಿಸಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಸೋದ್ಯಮದಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸಿ ಬಂಡವಾಳ ಆಕರ್ಷಿಸಲು ಹೂಡಿಕೆದಾರರ ಸಭೆ ಕರೆಯಲು ಉದ್ದೇಶಿಸಲಾಗಿದೆ.

SCROLL FOR NEXT