ರಾಜ್ಯ

ಬೆಂಗಳೂರನ್ನು ರೌಡಿಮುಕ್ತ ಮಾಡಲು ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚನೆ

Lingaraj Badiger

ಬೆಂಗಳೂರು: ನಗರದಲ್ಲಿ ರೌಡಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂಬಂಧಿಸಿದವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇಂಥ ಸಮಾಜಘಾತುಕರನ್ನು ಬಳಸಿಕೊಂಡು ಬೆದರಿಸುವ ಕಾರ್ಯಗಳು ನಡೆಯುತ್ತಿವೆ. ಇಂಥವುಗಳು ಕೂಡಲೇ ಬಂದ್ ಆಗಬೇಕು. ಬೆಂಗಳೂರನ್ನು ರೌಡಿಮುಕ್ತ ನಗರವನ್ನಾಗಿಸಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡುವ ರೌಡಿಗಳಿದ್ದಾರೆ. ಇಂಥವರನ್ನು ಬಳಸಿಕೊಳ್ಳುವ ವ್ಯಕ್ತಿಗಳು ಇದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಇಂಥ ರೌಡಿಗಳೊಂದಿಗೆ ಆಗಲಿ, ಅವರಿಗೆ ಬೆಂಬಲ ನೀಡುವವರ ಜೊತೆಯಾಲಿ ಆಗಲಿ ಪೊಲೀಸರು ಗುರುತಿಸಿಕೊಳ್ಳಬಾರದು. ಇಂಥವುಳಿಗೆ ಆಸ್ಪದವಿರಬಾರದು ಎಂದು ಸೂಚಿಸಿದ್ದೇನೆ ಎಂದರು.

ಗನ್ ಲೈಸೆನ್ಸ್ ಗೆ ಠಾಣೆಗೆ ಬರೋದು ಬೇಡ. ಆನ್ ಲೈನ್ ಮೂಲಕ ಆಗಬೇಕು ಎಂಬ ನಿಟ್ಟಿನಲ್ಲಿ ಆ್ಯಪ್ ಗೆ ಚಾಲನೆ ನೀಡಲಾಗಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಬೀಟ್ ವ್ಯವಸ್ಥೆ ಬಲಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ನಾಗರಿಕರ ಸುರಕ್ಷತೆ, ನೆಮ್ಮದಿ ಕಾಪಾಡುವ ಕೆಲಸಗಳಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಹೇಳಿದರು.

ಆಕ್ರಮವಾಗಿ ನೆಲೆಯೂರಿರುವ, ವೀಸಾ ಅವಧಿ ಮುಗಿದರೂ ವಾಪ್ಪಸ್ ತೆರಳದ ವಿದೇಶಿಯರನ್ನು ಗುರುತಿಸಬೇಕು, ಅವರ ಬಗ್ಗೆ ನಿಗಾ ವಹಿಸಬೇಕು. ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಬರುವ ನುಸುಳುಕೋರರನ್ನು ಬಂಧಿಸಬೇಕು. ವಿದೇಶಿಯರಿಗೆ ಆಧಾರ್ ಕಾರ್ಡ್, ವೋಟರ್ ಐಡಿ ನೀಡುವ ಜಾಲವೇ ನಗರದಲ್ಲಿ ಬೇರೂರಿದೆ. ಇಂಥವುಗಳನ್ನು ಮಟ್ಟ ಹಾಕುವ ಕೆಲಸವಾಗಬೇಕು. ನಗರಕ್ಕೆ ಬಂದ ವಿದೇಶಿಯರ ಮಾಹಿತಿ ಎಲ್ಲ ಪೊಲೀಸ್ ಠಾಣೆಯಲ್ಲಿಯೂ ಇರಬೇಕು ಎಂದು ಹೇಳಿರುವುದಾಗಿ ತಿಳಿಸಿದರು.

ಎಲ್ಲ ರೀತಿಯ ಅಪರಾಧಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಇಸ್ಪೇಟ್, ಕ್ಯಾಸಿಯೋ ಅಡ್ಡೆಗಳ ಬಾಗಿಲು ಮುಚ್ಚಿಸುವ ಕೆಲಸವಾಗಬೇಕು. ಈಗಾಗಲೇ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಮುಂದೆಂದೂ ಇಂಥವುಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಸೂಚಿಸುರುವುದಾಗಿ ತಿಳಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರು, ಹೆಚ್ಚುವರಿ ಆಯುಕ್ತರು, ಎಲ್ಲ ವಿಭಾಗಗಳ ಡಿಸಿಪಿಗಳು ಭಾಗವಹಿಸಿದ್ದರು.

SCROLL FOR NEXT