ರಾಜ್ಯ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಎಸ್.ಆರ್. ಪಾಟೀಲ್ ಸೂಕ್ತ ಅಭ್ಯರ್ಥಿ: ವೀರಪ್ಪ ಮೊಯ್ಲಿ

Ramyashree GN

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಎಸ್‌.ಆರ್. ಪಾಟೀಲ್ ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ  ಹೇಳಿದ್ದಾರೆ.

ರಾಜ್ಯದಲ್ಲಿ ಮುಂದಿನ ವರ್ಷ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಗದ್ದುಗೆ ಏರುವ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಇಬ್ಬರ ಮಧ್ಯೆ ಪೈಪೋಟಿ ಎದ್ದಿದೆ ಎಂದುಕೊಳ್ಳುತ್ತಿರುವಾಗಲೇ, ಹಿರಿಯ ನಾಯಕರೊಬ್ಬರ ಹೆಸರು ಇದೀಗ ಮುನ್ನೆಲೆಗೆ ಬಂದಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿರುವಂತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಎಸ್‌.ಆರ್. ಪಾಟೀಲ್ ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಭಾನುವಾರ ಹೇಳಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಅವಕಾಶ ಬಂದಿದೆ. ಎಸ್.ಎಂ.ಕೃಷ್ಣ ನಂತರ ಸಿಎಂ ಆಗುವ ಅವಕಾಶ ಬಂದಿದ್ದು, ಅದನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಎಸ್.ಆರ್. ಪಾಟೀಲ್ ಅವರನ್ನ ಎಳೆದು ತಂದಿದ್ದಾರೆ.

ಅಲ್ಲದೆ, ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ಎಸ್‌.ಆರ್. ಪಾಟೀಲ್ ಅವರ ಹೆಸರನ್ನು ಮೊಯ್ಲಿ ಶಿಫಾರಸು ಮಾಡಿದ್ದಾರೆ.

'ನನ್ನ ಪ್ರಕಾರ, ಅತ್ಯಂತ ಸಮರ್ಥ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು ಎಸ್.ಆರ್. ಪಾಟೀಲ್. ಹೀಗಾಗಿ ಅವರನ್ನು ಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಶಿಫಾರಸ್ಸು ಮಾಡಿದ್ದೆ. ಅಲ್ಲದೆ, ಅವರು ಕರ್ನಾಟಕದ ಮುಖ್ಯಮಂತ್ರಿ ಆಗಲು ಆದರ್ಶ ವ್ಯಕ್ತಿಯೂ ಹೌದು' ಎಂದು ವೀರಪ್ಪ ಮೊಯ್ಲಿ ಭಾನುವಾರ (ಜುಲೈ 31) ಪಾಟೀಲ್ ಅವರ ಜನ್ಮದಿನಾಚರಣೆಯಲ್ಲಿ ಹೇಳಿದ್ದಾರೆ.

2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ನಾಯಕರಲ್ಲಿ ಮುಖ್ಯಮಂತ್ರಿ ಯಾರು ಎಂಬ ಗೊಂದಲ ಕೂಡ ಮನೆಮಾಡಿದೆ. ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಎದುರಾಗಿದೆ.

SCROLL FOR NEXT