ರಾಜ್ಯ

ಬೈಕ್ ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟಣೆ ಮಾಡಿ ಬಂದ ಗಡಿನಾಡ ಕನ್ನಡತಿ ಅಮೃತಾ ಜೋಶಿ

Sumana Upadhyaya

ಬೆಂಗಳೂರು: ಈ ವರ್ಷ ಭಾರತ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಕಾಸರಗೋಡು ನಿವಾಸಿಗಳ ಸಂಘಟನೆಯಾದ ವಿಕಾಸ ಟ್ರಸ್ಟ್  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇಂದು ಆಗಸ್ಟ್ 2 ಮಂಗಳವಾರ ಸಂಜೆ 5 ಗಂಟೆಗೆ ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ ರಾಜಕುಮಾರ್ ಗಾಜಿನ ಸಭಾಂಗಣದಲ್ಲಿ  ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ.

ಏನಿದು ಕಾರ್ಯಕ್ರಮ: ಕಾಸರಗೋಡು ಜಿಲ್ಲೆಯ ಕುಂಬಳೆಯ ಕುಮಾರಿ ಅಮೃತಾ ಜೋಶಿ (21 ವರ್ಷ) ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲ ದೇಶದ ಏಕತೆಯನ್ನು ಸಾರಲು ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಬಂದಿದ್ದಾರೆ. ಅವರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಈಗಾಗಲೇ ಈಶಾನ್ಯ ಭಾರತ, ಕಾಶ್ಮೀರ ಸೇರಿದಂತೆ ಸುಮಾರು 22,000 ಕಿಲೋ ಮೀಟರ್ ಸಂಚರಿಸಿ ತನ್ನ ಯಾತ್ರೆಯ ಕೊನೆಯ ಭಾಗವಾಗಿ ಬೆಂಗಳೂರು-ಶಿವಮೊಗ್ಗ ಮೂಲಕ ತಮ್ಮೂರು ಕುಂಬಳೆ ತಲುಪಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಮಾಹಿತಿ ನೀಡಲಾಗುವುದು. ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಹಲವಾರು ಗಣ್ಯರು ಮತ್ತು ನೂರಾರು ಜನರು ತ್ರಿವರ್ಣ ಧ್ವಜಗಳೊಂದಿಗೆ ಗಡಿನಾಡ ಕನ್ನಡತಿ ಸಾಹಸಿ ಯುವತಿಯನ್ನು ಸ್ವಾಗತಿಸಲಿದ್ದು, ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಮೃತ ಜೋಶಿ ಅವರನ್ನು ಸನ್ಮಾನಿಸಲಾಗುತ್ತದೆ. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಹಿರಿಯ ಉದ್ಯಮಿ ಟಿ.ವಿ. ಮೋಹನದಾಸ್ ಪೈ ಅವರು ಭಾಗವಹಿಸಲಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾಸರಗೋಡಿನ ವಿಕಾಸ ಟ್ರಸ್ಟ್  ಅಧ್ಯಕ್ಷ ರವಿನಾರಾಯಣ ಗುಣಾಜೆ ತಿಳಿಸಿದ್ದಾರೆ. 

SCROLL FOR NEXT