ರಾಜ್ಯ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ: ಸಿಬಿಐ ವಿರುದ್ಧ ಡಿಕೆ ಶಿವಕುಮಾರ್ ಹೈಕೋರ್ಟ್ ಮೊರೆ

Nagaraja AB

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದತಿ ಕೋರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. 

ಅಕ್ಟೋಬರ್ 3, 2020 ರಂದು ದಾಖಲಿಸಿರುವ ಎಫ್ ಐಆರ್ ಕಾನೂನು ಬಾಹಿರವಾಗಿದೆ ಎಂದು ಡಿಕೆ ಶಿವಕುಮಾರ್ ಪರ ಹಿರಿಯ ವಕೀಲರಾದ ಬಿವಿ ಆಚಾರ್ಯ ಮತ್ತು ಸಿಹೆಚ್ ಜಾಧವ್ ವಾದಿಸಿದರು. ಡಿಕೆ ಶಿವಕುಮಾರ್ ವಿರುದ್ಧ  ಎಫ್‌ಐಆರ್ ದಾಖಲಿಸುವ ವೇಳೆ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಅನುಸರಿಸಬೇಕಾದ ನಿಯಮ ಪಾಲಿಸಿಲ್ಲ. ಪ್ರಾಥಮಿಕ ತನಿಖೆಯ ಅಂಶಗಳೇನು ಎಂಬುದನ್ನೂ ಎಫ್‌ಐಆರ್‌ನಲ್ಲಿ ವಿವರಿಸಿಲ್ಲ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್  ಕೃಷಿ ಕುಟುಂಬಕ್ಕೆ ಸೇರಿದ್ದು,  ರಿಯಲ್ ಎಸ್ಟೇಟ್, ಶಿಕ್ಷಣ ಕೇತ್ರ ಸೇರಿದಂತೆ ಇತರ ವ್ಯವಹಾರಗಳ ಮೂಲಕವೂ ಆದಾಯದ ಮೂಲ ಹೊಂದಿದ್ದಾರೆ. ಡಿಕೆಶಿ ಕುಟುಂಬದ ಇತರ ಸದಸ್ಯರ ಆದಾಯವನ್ನೂ ಸಹ ಅವರ ಲೆಕ್ಕಕ್ಕೇ ಸೇರಿಸಲಾಗಿದೆ ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ವಾದಿಸಿದ ವಕೀಲರು, ಸಿಬಿಐ ದಾಖಲು ಮಾಡಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದರು. ಇದನ್ನು ಆಲಿಸಿದ ಪೀಠವು ಸಿಬಿಐಗೆ ನೋಟಿಸ್‌ ಜಾರಿ ಮಾಡಿದೆ.

SCROLL FOR NEXT