ರಾಜ್ಯ

212 ನೇ ಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ: ಡಾ.ರಾಜ್, ಅಪ್ಪು ಥೀಮ್ ಗೆ 6,22 ಲಕ್ಷ ಹೂ ಬಳಕೆ

Srinivas Rao BV

ಬೆಂಗಳೂರು: ಕೊರೋನಾ ಕಾರಣದಿಂದಾಗಿ 2020 ರಿಂದ ಸತತವಾಗಿ ಸ್ಥಗಿತಗೊಂಡಿದ್ದ ಪುಷ್ಪ ಪ್ರದರ್ಶನ ಈ ವರ್ಷ ನಡೆಯುತ್ತಿದ್ದು, 212 ನೇ ಪುಷ್ಪ ಪ್ರದರ್ಶನ ಆ.5 ರಿಂದ 15 ವರೆಗೆ ಆಯೋಜನೆಗೊಂಡಿದ್ದು ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. 

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಲಾಲ್ ಬಾಗ್ ನಲ್ಲಿ ಉದ್ಘಾಟನೆಗೊಂಡಿರುವ ಪುಷ್ಪ ಪ್ರದರ್ಶನ ಡಾ.ರಾಜ್, ಅಪ್ಪು ಥೀಮ್ ಹೊಂದಿದ್ದು, 2.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 

ಆ.15 ವರೆಗೆ ಈ ಪುಷ್ಪ ಪ್ರದರ್ಶನ ನಡೆಯಲಿದ್ದು, ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 70 ರೂಪಾಯಿಗಳಿದ್ದರೆ, ವಾರಂತ್ಯದಲ್ಲಿ 75 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಹೇಳಿದ್ದಾರೆ. 

ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳಿಗೆ ಈ ಪ್ರದರ್ಶನ ಉಚಿತವಾಗಿರಲಿದ್ದು, ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ. 

ಡಾ. ರಾಜ್ ಕುಮಾರ್ ಅವರ ಗಾಜನೂರು ಮನೆಯ ತದ್ರೂಪಿ ಹಾಗೂ ಪುನೀತ್ ರಾಜ್ ಕುಮಾರ್ ಅವರ ಶಕ್ತಿ ಧಾಮದ ತದ್ರೂಪಿಗಳನ್ನು ಗುಲಾಬಿಗಳು ಮತ್ತು ಕ್ರೈಸಾಂಥೆಮಮ್ ಗಳಿಂದ 30 ಅಡಿ ಎತ್ತರದ ವರೆಗೆ ನಿರ್ಮಿಸಲಾಗಿದೆ. 

ಡಾ. ರಾಜ್ ಕುಮಾರ್ ಅವರ ನಿವಾಸದ ತದ್ರೂಪಿಯನ್ನು ನಿರ್ಮಿಸಲು 1.75 ಲಕ್ಷ ಗುಲಾಬಿಗಳನ್ನು ಹಾಗೂ 1.50 ಲಕ್ಷ ಕ್ರೈಸಾಂಥೆಮಮ್ ಹೂಗಳನ್ನು ಬಳಕೆ ಮಾಡಲಾಗಿದ್ದರೆ, ಶಕ್ತಿ ಧಾಮದ ಮಾದರಿಯನ್ನು ನಿರ್ಮಿಸುವುದಕ್ಕಾಗಿ 1.60 ಲಕ್ಷ ಗುಲಾಬಿ ಹಾಗೂ 40,000ಕ್ರೈಸಾಂಥೆಮಮ್ ಗಳ ಬಳಕೆಯಾಗಿದೆ.

ಪ್ರದರ್ಶಕರ ನಡುವೆ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಟ್ರೋಫಿ ನೀಡಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಊಟಿ, ನ್ಯೂ ಜಿಲ್ಯಾಂಡ್, ಅಮೇರಿಕ, ಹಾಲೆಂಡ್, ಅರ್ಜೆಂಟೀನಾ, ಕೀನ್ಯಾ ಹಾಗೂ ಇತರ ದೇಶಗಳಿಂದ ಹೂವುಗಳನ್ನು ತರಿಸಲಾಗಿದೆ. ವರ್ಷವಿಡೀ ಹೂ ಬಿಡುವಂತಹ 65 ವಿವಿಧ ಹೂ ಸಸ್ಯಗಳನ್ನು ಗ್ಲಾಸ್ ಹೌಸ್ ನಲ್ಲಿ ನೋಡಬಹುದಾಗಿದೆ.

SCROLL FOR NEXT