ರಾಜ್ಯ

ಅರಣ್ಯ ಸಿಬ್ಬಂದಿಗೆ ಬೆದರಿಕೆ: ಜೆಡಿಎಸ್ ಶಾಸಕ ಸುರೇಶ್ ಗೌಡ ವಿರುದ್ಧ ಎಫ್‌ಐಆರ್ ದಾಖಲು

Lingaraj Badiger

ಮೈಸೂರು: ಅರಣ್ಯ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರ ವಿರುದ್ಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿದೆ.

ದೂರು ಆಧರಿಸಿ ಪೊಲೀಸರು, ನಾಗಮಂಗಲ ತಾಲೂಕಿನ ಹಳತಿ ಗ್ರಾಮದ ಡೀಮ್ಡ್ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮರಗಳಿಗೆ ಕತ್ತರಿಸಲು ಬಂದ ಗ್ರಾಮಸ್ಥರನ್ನು ತಡೆದ ಅರಣ್ಯ ಸಿಬ್ಬಂದಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಜೆಡಿಎಸ್ ಶಾಸಕ ಸೇರಿದಂತೆ 10 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಶುಕ್ರವಾರ ರಾತ್ರಿ 11.30ಕ್ಕೆ ದಾಖಲಾದ ಎಫ್‌ಐಆರ್‌ನಲ್ಲಿ, ನಾಗಮಂಗಲ ಆರ್‌ಎಫ್‌ಒ ಸತೀಶ ಬಿ ಅವರು, ಆಗಸ್ಟ್ 4 ರಂದು ಹಲ್ತಿ ಅರಣ್ಯ ಭೂಮಿಯಲ್ಲಿ ಒತ್ತುವರಿ ತೆರವು ಮಾಡುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಾಸಕ ಸುರೇಶ್ ಗೌಡ ಅವರು, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ದೂರಿನ ಆಧಾರದ ಮೇಲೆ ನಾಗಮಂಗಲ ಪೊಲೀಸರು ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 504 (ಅವಮಾನ), 506 (ಅಪರಾಧ ಬೆದರಿಕೆ), 353 (ಸಾರ್ವಜನಿಕ ನೌಕರನ ಕರ್ತವ್ಯ ಅಡ್ಡಿ) ಮತ್ತು 149 (ಕಾನೂನುಬಾಹಿರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. 

SCROLL FOR NEXT