ರಾಜ್ಯ

ವಾರ್ಡ್‌ ಪುನರ್ ವಿಂಗಡಣೆ: ರಾಜ್ಯ ಸರ್ಕಾರ, ಚುನಾವಣಾ ಆಯೋಗ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

Lingaraj Badiger

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡ್‌ಗಳ ಪುನರ್ ವಿಂಗಡಣೆಗೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.

ಜುಲೈ 14, 2022 ರ ಅಧಿಸೂಚನೆಯನ್ನು ಪ್ರಶ್ನಿಸಿ ಎಸ್‌ಡಿ ಗುರುರಾಜ್, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಎಸ್ ಇಸ್ಮಾಯಿಲ್ ಜಬೀವುಲ್ಲಾ ಮತ್ತು ಇತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು, ನೋಟಿಸ್ ಜಾರಿಗೊಳಿಸಿದ್ದಾರೆ.

ಅವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಲಾಗಿದೆ. ವಾರ್ಡ್‌ಗಳ ಜನಸಂಖ್ಯೆ ನಿಗದಿಯಲ್ಲೂ ತಾರತಮ್ಯ ಮಾಡಲಾಗಿದೆ. ಆದ್ದರಿಂದ ವಾರ್ಡ್‌ ಮರು ವಿಂಗಡಣೆಯ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ವಾರ್ಡ್‌ಗಳನ್ನು ಬಹು ಭಾಗಗಳಾಗಿ ವಿಭಜಿಸಲಾಗಿದೆ, ಅದು ಇತರ ಕ್ಷೇತ್ರಗಳ ಭೌತಿಕ ಗಡಿಯೊಳಗೆ ಬರುತ್ತದೆ ಎಂದು ಅರ್ಜಿದಾರರೊಬ್ಬರು ಆರೋಪಿಸಿದ್ದಾರೆ. ಇದು ಬಿಬಿಎಂಪಿ ಕಾಯ್ದೆಯ ಸೆಕ್ಷನ್ 7(1)(ಬಿ) ಅಡಿಯಲ್ಲಿ ಒಂದು ವಾರ್ಡ್ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹರಡುವಂತಿಲ್ಲ ಎಂಬ ನಿಯಮಕ್ಕೆ ವಿರುದ್ಧವಾಗಿದೆ. ವಾರ್ಡ್‌ಗಳ ವಿಂಗಡಣೆಯನ್ನು ಯಾವುದೇ ತರ್ಕಬದ್ಧ ಆಧಾರವಿಲ್ಲದೆ ನಿರಂಕುಶವಾಗಿ ಮಾಡಲಾಗಿದೆ ಮತ್ತು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

SCROLL FOR NEXT