ರಾಜ್ಯ

ಬಿಜೆಪಿಯವರಿಗೆ ಅಷ್ಟು ದೇಶಭಕ್ತಿಯಿದ್ದರೆ ಉಚಿತವಾಗಿ ತ್ರಿವರ್ಣ ಧ್ವಜ ಹಂಚಲಿ, ಇವರು ಕೇವಲ ಪ್ರಚಾರಪ್ರಿಯರು: ಶಿವರಾಜ್ ತಂಗಡಗಿ

Sumana Upadhyaya

ಕೊಪ್ಪಳ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿಯವರು ಮಾಡುತ್ತಿರುವ ಹರ್ ಘರ್ ತಿರಂಗ ಕಾರ್ಯಕ್ರಮ ನಿಜವಾದ ದೇಶಭಕ್ತಿಯಿಂದ ಎಂದು ನನಗೆ ಅನಿಸುತ್ತಿಲ್ಲ. ತ್ರಿವರ್ಣ ಧ್ವಜಕ್ಕಿದ್ದ ಗೌರವ, ನಿಯಮಕ್ಕಿದ್ದ ಗೌರವವನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ.

ಕೊಪ್ಪಳದಲ್ಲಿಂದು ಮಾತನಾಡಿದ ಅವರು, ಕಾಶ್ಮೀರ ಫೈಲ್ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿ ಎಲ್ಲರೂ ನೋಡಿ ಎಂದು ತೋರಿಸಿದ್ದ ರಾಷ್ಟ್ರಪ್ರೇಮವನ್ನು ಇಂದು ಬಿಜೆಪಿ ನಾಯಕರು ದೇಶದ ತ್ರಿವರ್ಣ ಧ್ವಜದ ಮೇಲೆ ತೋರಿಸುತ್ತಿಲ್ಲ, 40 ರೂಪಾಯಿ, 50 ರೂಪಾಯಿ ಕೊಟ್ಟು ಧ್ವಜ ಖರೀದಿಸಿ ಎಂದು ಹೇಳುತ್ತಿದ್ದಾರೆ. ಅಂದರೆ ಇವರಿಗಿರುವ ನಿಜವಾದ ದೇಶಭಕ್ತಿ ಇದರಿಂದ ಗೊತ್ತಾಗುತ್ತದೆ ಎಂದು ಟೀಕಿಸಿದರು.

ಇವರೆಲ್ಲ ದೇಶದ ಗೌರವಯುತವಾದ ಧ್ವಜದ ಹೆಸರಿನಲ್ಲಿ ಡೋಂಗಿ ಮಾಡುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ಈಗಾಗಲೇ ದೇಶದ ಜನತೆ ಬಹಳ ಕಷ್ಟದಲ್ಲಿದ್ದಾರೆ. ಅಗತ್ಯ ವಸ್ತುಗಳ ಮೇಲೆಯೂ ಜಿಎಸ್ ಟಿ ಹಾಕಿದ್ದಾರೆ. ಹೀಗಿರುವಾಗ ಮತ್ತೆ ಹಣ ಕೊಟ್ಟು ರಾಷ್ಟ್ರಧ್ವಜ ಖರೀದಿಸಿ ಎಂದು ಹೇಳುವುದು ಎಷ್ಟು ಸರಿ, ಅಷ್ಟಿದ್ದರೆ ಸರ್ಕಾರ ಉಚಿತವಾಗಿ ನೀಡಲಿ ಎಂದರು.

ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ, ಕಾಶ್ಮೀರಿ ಫೈಲ್ಸ್ ನಂತಹ ಸಿನಿಮಾ ತೋರಿಸಲು ತೆರಿಗೆ ವಿನಾಯ್ತಿ ನೀಡುತ್ತೀರಿ. ಹಾಗಿರುವಾಗ ಧ್ವಜವನ್ನು ಉಚಿತವಾಗಿ ನೀಡಲಿ. ಇದು ದೇಶದ ಸಂವಿಧಾನವನ್ನು ತಿದ್ದಲು ಬಿಜೆಪಿ ಮಾಡುತ್ತಿರುವ ಕುತಂತ್ರ. ಇದೊಂದು ಭಾಗ ಎನಿಸುತ್ತಿದೆ ಎಂದು ಸಂದೇಹ ವ್ಯಕ್ತಪಡಿಸಿದರು.

ಮೇಕ್ ಇನ್ ಇಂಡಿಯಾ ಎನ್ನುತ್ತಾರಲ್ಲ, ಎಲ್ಲಿದೆ ಮೇಕ್ ಇನ್ ಇಂಡಿಯಾ ಚೀನಾದಿಂದ ಧ್ವಜವನ್ನು ತರಿಸುವುದು, ಪಾಲಿಸ್ಟರ್ ನಿಂದ ಧ್ವಜ ತಯಾರಿಸುವುದು ಮೇಕ್ ಇನ್ ಇಂಡಿಯಾವೇ. ಇವರ ಬಂಡವಾಳ ಎಲ್ಲ ಗೊತ್ತಾಗುತ್ತಿದೆ. ಇವರು ಕೇವಲ ಪ್ರಚಾರಪ್ರಿಯರು ಎಂದು ಟೀಕಿಸಿದರು.

SCROLL FOR NEXT