ರಾಜ್ಯ

ಬೆಂಗಳೂರು: ಆಸ್ತಿಗಾಗಿ ಅಜ್ಜನನ್ನು ಕೊಂದ ಮೊಮ್ಮಗನ ಬಂಧನ

Shilpa D

ಬೆಂಗಳೂರು: ಸ್ನೇಹಿತನ ಜೊತೆ ಸೇರಿ ತಾತನನ್ನು ಕೊಂದಿದ್ದ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸಿ. ಪುಟ್ಟಯ್ಯ (70) ಎಂಬುವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಮೊಮ್ಮಗ ಜಯಂತ್ ಅಲಿಯಾಸ್ ಬಳ್ಳೆ (20) ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

‘ಸುರಭಿ ಬಡಾವಣೆಯ 2ನೇ ಮುಖ್ಯರಸ್ತೆಯ ನಿವಾಸಿ  ಕೇಂದ್ರೀಯ ವಿದ್ಯಾಲಯದ  ನಿವೃತ್ತ ಉದ್ಯೋಗಿಯಾಗಿದ್ದ ಪುಟ್ಟಯ್ಯ ಅವರನ್ನು ಅಗಸ್ಟ್ 17ರಂದು ಬೆಳಿಗ್ಗೆ ಕೊಲೆ ಮಾಡಲಾಗಿತ್ತು. ಹಣ ಹಾಗೂ ಚಿನ್ನಾಭರಣ ದೋಚಲೆಂದು ದುಷ್ಕರ್ಮಿಗಳು ಕೃತ್ಯ ಎಸಗಿರುವ ಸಂಶಯ ಆರಂಭದಲ್ಲಿತ್ತು. ತನಿಖೆ ಕೈಗೊಂಡಾಗ, ಮೊಮ್ಮಗ ಜಯಂತ್‌ನೇ ಕೊಲೆ ಆರೋಪಿ ಎಂಬುದು ಗೊತ್ತಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪುಟ್ಟಯ್ಯ ಅವರ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಜಯಂತ್ ಪ್ರಯತ್ನಿಸುತ್ತಿದ್ದ. ಇದಕ್ಕೆ ಪುಟ್ಟಯ್ಯ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಹಲವು ಬಾರಿ ಜಗಳವಾಗಿತ್ತು. ಇದರ ನಡುವೆಯೇ ಆರೋಪಿ ಜಯಂತ್, ಆಸ್ತಿ ಮೇಲೆ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಮುಂದಾಗಿದ್ದ. ಅದಕ್ಕೂ ಪುಟ್ಟಯ್ಯ ಸಹಿ ಮಾಡಿರಲಿಲ್ಲ.

ಅಜ್ಜ ಬದುಕಿದ್ದರೆ ತನಗೆ ಆಸ್ತಿ ಸಿಗುವುದಿಲ್ಲ ಎಂದುಕೊಂಡಿದ್ದ ಜಯಂತ್, ಹಾಸನದ ಗೊರೂರಿನ ಸ್ನೇಹಿತ ಯಾಸೀನ್ (22) ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ. ಮನೆಗೆ ನುಗ್ಗಿದ್ದ ಇಬ್ಬರೂ ಪುಟ್ಟಯ್ಯ ಅವರನ್ನು ಕೊಂದು ಪರಾರಿಯಾಗಿದ್ದರು’ ಎಂದು ಮೂಲಗಳು ತಿಳಿಸಿವೆ.

ಕೊಲೆಯಾದ ಸ್ಥಳ ಹಾಗೂ ಮನೆಯ ಅಕ್ಕ–ಪಕ್ಕದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ಜಯಂತ್‌ನ ಸುಳಿವು ಸಿಕ್ಕಿತ್ತು. ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡ. ನಂತರ, ಸ್ನೇಹಿತ ಯಾಸೀನ್‌ನನ್ನೂ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಪುಟ್ಟಯ್ಯನವರ ಮನೆಗೆ ಹಿಂಬಾಗಿಲಿನಿಂದ ನುಗ್ಗಿದ ಜಯಂತ್ ಮುಖ ಹಾಗೂ ಎದೆಗೆ ಗುದ್ದಿದ್ದಾನೆ. ಪುಟ್ಟಯ್ಯ ಪ್ರಜ್ಞೆ ತಪ್ಪಿದ ನಂತರ ಆರೋಪಿಗಳು ತಲೆದಿಂಬಿನಿಂದ ಮುಖಕ್ಕೆ ಹೊತ್ತಿ ಕೊಲೆ ಮಾಡಿದ್ದಾರೆ. ಮನೆಯ ಹೊರಗೆ ಕಾವಲು ಕಾಯುವ ಮೂಲಕ ಯಾಸೀನ್ ಜಯಂತ್‌ಗೆ ಸಹಾಯ ಮಾಡಿದ್ದ.

SCROLL FOR NEXT