ರಾಜ್ಯ

ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ವಿಡಿಯೋ ವೈರಲ್; ಶಾಲೆಗಳಿಗೆ ರಜೆ ಘೋಷಣೆ

Srinivasamurthy VN

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಈ ಕುರಿತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸಮೀಪದ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.

ಬೆಳಗಾವಿಯ ಗಾಲ್ಫ್ ಮೈದಾನ ಸಮೀಪದಲ್ಲಿ ಮತ್ತೆ ಚಿರತೆ ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರ ಆತಂಕ ಹೆಚ್ಚಿಸಿದೆ. ಈಗ್ಗೆ 20 ದಿನಗಳ ಹಿಂದೆ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಚಿರತೆ ಪರಾರಿಯಾಗಿತ್ತು. ಇದೀಗ ಸೋಮವಾರ ಹಿಂಡಲಗಾ ರಸ್ತೆಯ ಮಹಾತ್ಮ ಗಾಂಧೀ ವೃತ್ತ ಬಳಿ ರಸ್ತೆಗೆ ಅಡ್ಡವಾಗಿ ಸಂಚರಿಸುವಾಗ ವಾಹನ ಚಾಲಕರ ಕಣ್ಣಿಗೆ ಬಿದ್ದಿದೆ. ಚಾಲಕ ಚಿತ್ರೀಕರಣ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.

ಆ.5 ರಂದು ಜಾಧವ ನಗರದಲ್ಲಿ ಕಾಣಿಸಿಕೊಂಡು ತಲೆಮರೆಸಿಕೊಂಡಿದ್ದ ಚಿರತೆಗಾಗಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸುತ್ತ ಬಂದಿತ್ತಾದರೂ ಚಿರತೆ ಪತ್ತೆಯಾಗಿರಲಿಲ್ಲ. ಚಿರತೆ ಕಂಡು ಬಂದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಶಂಕಿತ ಪ್ರದೇಶಗಳಲ್ಲಿ ಚಿರತೆ ಸೆರೆಹಿಡಿಯಲು ಶೋಧ ಆರಂಭಿಸಿದ್ದಾರೆ.

ಶಾಲೆಗಳಿಗೆ ರಜೆ ಘೋಷಣೆ
ಇನ್ನು ಚಿರತೆ ದಾಳಿ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಸಮೀಪದ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಹಿಂದೆ ಚಿರತೆ ಕಂಡು ಬರದ ಕಾರಣ ಶಾಲೆಗಳನ್ನು ಪುನರಾರಂಭಿಸಿದ್ದರು. ಆದರೆ ಈಗ ಮತ್ತೆ ಚಿರತೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ 22 ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ನಾಲತ್ವಾಡ ಅವರು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT