ರಾಜ್ಯ

ಪೌರ ಕಾರ್ಮಿಕರಿಗೆ ಸಿಹಿ ಸುದ್ದಿ: 2 ತಿಂಗಳಲ್ಲಿ ಕೆಲಸ ಕಾಯಂ ಆದೇಶ- ಗೋವಿಂದ ಕಾರಜೋಳ

Shilpa D

ಮೈಸೂರು: ಪೌರ ಕಾರ್ಮಿಕರ ಕಾಯಂಗೆ ಎರಡು ತಿಂಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಕಾಯಂಗೆ ಸಂಬಂಧಿಸಿದಂತೆ ಇನ್ನೆರಡು ತಿಂಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದರು. ನೇರ ಪಾವತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಇನ್ನೆರಡು ತಿಂಗಳಲ್ಲಿ ಕಾಯಂಗೊಳಿಸಲಾಗುವುದು. ನೌಕರರ ಕಾಯಂಗೊಳಿಸಲು ಇರುವ ಕಾನೂನು ತೊಡಕು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ದೇಶವು 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದರೂ ದಲಿತರು ಮತ್ತು ದೀನದಲಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಲಾಗಿಲ್ಲ. ಇವತ್ತಿಗೂ ಕೈಯಿಂದ ಕಸ ತೆಗೆಯುವುದನ್ನು ಕಾಣುತ್ತಿದ್ದೇವೆ. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಸಫಾಯಿ ಕರ್ಮಚಾರಿ ಆಯೋಗವನ್ನು ಸ್ಥಾಪಿಸಿದರು, ಆದರೆ ಸಮಸ್ಯೆಗಳು ಇನ್ನೂ ಮುಂದುವರೆದಿದೆ ಎಂದರು.

ಹಲವು ಸರ್ಕಾರಗಳು ಬಂದವು  ಹೋದವು, ಆದರೆ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳು ಮಾತ್ರ ಬಗೆ ಹರಿದಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಕೇವಲ 6,000 ಪೌರಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಅನುಪಾತದ ಪ್ರಕಾರ ಕನಿಷ್ಠ 29,000 ಪೌರಕಾರ್ಮಿಕರು ಇರಬೇಕು ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್‌ ಮ್ಯಾನ್ಯುವಲ್‌ ಸ್ಕಾವೆಂಜಿಂಗ್‌ ಸಮಸ್ಯೆ ನಿವಾರಣೆಯ ಮಹತ್ವವನ್ನು ಒತ್ತಿ ಹೇಳಿದರು. 10,000 ಕ್ಕೂ ಹೆಚ್ಚು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

SCROLL FOR NEXT