ರಾಜ್ಯ

ದಾಖಲೆ ಬರೆದ ಬೆಂಗಳೂರಿನ ಆಗಸ್ಟ್ ಮಳೆ; 1998ರ ಬಳಿಕ ಅತೀ ಹೆಚ್ಚು ವರ್ಷಧಾರೆ

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಈ ಹಿಂದಿನ ದಾಖಲೆಗಳನ್ನೆಲ್ಲಾ ಹಿಂದಿಕ್ಕಿದ್ದು, ಬೆಂಗಳೂರು ಇತಿಹಾಸದಲ್ಲೇ ಆಗಸ್ಟ್ ತಿಂಗಳಲ್ಲಿ ಸುರಿದ ಅತೀ ಹೆಚ್ಚು ಮಳೆಯಾಗಿದೆ.

ಈ ಕುರಿತು ಬೆಂಗಳೂರು ಹವಾಮಾನ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ಇತಿಹಾಸದಲ್ಲೇ ಆಗಸ್ಟ್ ತಿಂಗಳಲ್ಲಿ ಸುರಿದ 2ನೇ ಅತೀ ಹೆಚ್ಚಿನ ಪ್ರಮಾಣದ ಮಳೆ ಇದಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್ 1ರಿಂದ ಈ ವರೆಗೂ ಸುಮಾರು 364.2 ಮಿಮೀ  ಮಳೆಯಾಗಿದ್ದು, ಇದು 1998ರ ಬಳಿಕ ರಾಜಧಾನಿಯಲ್ಲಿ ದಾಖಲಾದ 2ನೇ ಅತೀ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಈ ಹಿಂದೆ 1998ರಲ್ಲಿ ಬೆಂಗಳೂರಿನಲ್ಲಿ 387.1 ಮಿಮೀ ಮಳೆಯಾಗಿತ್ತು. ಇದು ಈ ವರೆಗಿನ ಸಾರ್ವಕಾಲಿಕ ದಾಖಲೆ ಪ್ರಮಾಣದ ಮಳೆಯಾಗಿದೆ. 

ಹಾಲಿ ತಿಂಗಳಿನಲ್ಲಿ ಈ ಮಳೆಗಿಂತ ಕೇವಲ 23 ಮಿಮೀ  ಮಳೆ ಕಡಿಮೆಯಾಗಿದೆ. ಅಂತೆಯೇ ಮುಂದಿನ 24 ಗಂಟೆಗಳಲ್ಲಿ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಈ ದಾಖಲೆಯನ್ನು ಕೂಡ ಮುರಿಯಲಿದ್ದಾನೆಯೇ ವರುಣದೇವ ಎಂದು ಕಾದು ನೋಡಬೇಕಿದೆ. 

ಐದು ವರ್ಷ ದಾಖಲೆ ಮುರಿದಿದ್ದ ಮಳೆ
ಈ ಹಿಂದೆ ಆಗಸ್ಟ್ 28ರ ಹೊತ್ತಿಗೆ 184.4 ಮಿ.ಮೀ ಮಳೆಯಾಗಿತ್ತು. ಇದು ಕಳೆದ ಐದು ವರ್ಷಗಳಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಅತೀ ಹೆಚ್ಚಿನ ಮಳೆಯಾಗಿತ್ತು. ಇದೀಗ ರಾಜ್ಯದಲ್ಲಿ ಮಳೆ ಮುಂದುವರೆದಿದ್ದು, ಈ ದಾಖಲೆ ಕೂಡ ಪತನವಾಗಿದೆ. ಶುಕ್ರವಾರ, ಮುಂಜಾನೆ 3 ರಿಂದ 6 ರ ನಡುವಿನ ಮೂರು ಗಂಟೆಗಳಲ್ಲಿ ನಗರದಲ್ಲಿ 41.4 ಮಿಮೀ ಮಳೆ ದಾಖಲಾಗಿತ್ತು. ಶನಿವಾರವೂ ನಗರದಲ್ಲಿ ಧಾರಾಕಾರ ಮಳೆ ಸುರಿದಿತ್ತು. 

2021ರಲ್ಲಿ ಆಗಸ್ಟ್‌ ತಿಂಗಳಲ್ಲಿ 98.5 ಮಿಲಿ ಮೀಟರ್ ಮಾತ್ರ ಮಳೆಯಾಗಿತ್ತು. 2018ರಲ್ಲಿ 185 ಮಿಲಿ ಮೀಟರ್ ಮಳೆ ಸುರಿದಿತ್ತು. ಆಗಸ್ಟ್‌ನಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 147 ಮಿಲಿ ಮೀಟರ್ ಆಗಿದ್ದು, ಈ ಬಾರಿ 184.4 ಮಿಲಿ ಮೀಟರ್ ಮಳೆಯಾಗಿದೆ. 2017ರ ಆಗಸ್ಟ್‌ನಲ್ಲಿ 351.8 ಮಿಲಿ ಮೀಟರ್ ಮಳೆಯಾಗಿರುವುದು ದಾಖಲೆಯಾಗಿದೆ.
 

SCROLL FOR NEXT