ರಾಜ್ಯ

ಕರ್ನಾಟಕದ ಕೋರ್ಟ್ ಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ಏರಿಕೆ!

Srinivas Rao BV

ಬೆಂಗಳೂರು: ನ್ಯಾಯಾಧೀಶರು ಹಾಗೂ ನ್ಯಾಯಾಂಗ ಅಧಿಕಾರಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದ್ದರೂ ಹುದ್ದೆಗಳು ಭರ್ತಿಯಾಗದೇ ಇರುವ ಕಾರಣದಿಂದ ಈಗಿರುವ ನ್ಯಾಯಾಧೀಶರ ಮೇಲೆ ಒತ್ತಡ ಹೆಚ್ಚಾಗತೊಡಗಿದೆ. 

ರಾಜ್ಯ ಹೈಕೋರ್ಟ್, ಜಿಲ್ಲಾ, ತಾಲೂಕು ಕೋರ್ಟ್ ಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ ನ ಪ್ರಕಾರ, ಜಿಲ್ಲಾ ಹಾಗೂ ತಾಲೂಕು ಕೋರ್ಟ್ ಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 18.08 ಲಕ್ಷಕ್ಕೆ ಏರಿಕೆಯಾಗಿದೆ. ಆ.30, 2022 ರ ವರೆಗಿನ ಮಾಹಿತಿಯ ಪ್ರಕಾರ ಕರ್ನಾಟಕ ಹೈಕೋರ್ಟ್ ನಲ್ಲಿ 2.98 ಲಕ್ಷ ಪ್ರಕರಣಗಳು ಬಾಕಿ ಇದೆ. 

ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ, ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರ ಪ್ರಕಾರ ಹುದ್ದೆಗಳು ಭರ್ತಿಯಾಗದೇ ಇರುವುದು ಬಾಕಿ ಇರುವ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.

ತಾವು ಈ ಹುದ್ದೆಗೆ ನೇಮಕವಾಗುವವರೆಗೂ ಈ ಹುದ್ದೆ 5 ತಿಂಗಳ ಕಾಲ ಖಾಲಿ ಇತ್ತು. ನ್ಯಾಯಾಧೀಶರು ನಿವೃತ್ತರಾದಾಗ ಅಥವಾ ವರ್ಗಾವಣೆಯಾದಾಗ ಅವರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುವುದರಲ್ಲಿ ಉಂಟಾಗುತ್ತಿರುವ ವಿಳಂಬವೂ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಸಾಕ್ಷಿಗಳು ಕೋರ್ಟ್ ಗೆ ಬರದೇ ಇರುವುದರಿಂದ ಕೋರ್ಟ್ ಗಳಿಗೆ ಆದೇಶ ನೀಡುವುದೂ ಕಷ್ಟವಾಗಲಿದೆ.
 
"ಕೇವಲ ನ್ಯಾಯಾಧೀಶರ ಸಂಖ್ಯೆ, ಮೂಲಸೌಕರ್ಯ ಹೆಚ್ಚಳದಿಂದ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಊಹಾತ್ಮಕ ದಾವೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸಗಳಾಗಬೇಕು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ನಿವೃತ್ತ ನ್ಯಾಯಾಧೀಶ, ನಿವೃತ್ತ ಲೋಕಾಯುಕ್ತ ಎನ್ ಸಂತೋಷ್ ಹೇಳಿದ್ದಾರೆ.

SCROLL FOR NEXT