ರಾಜ್ಯ

ಬಿಜೆಪಿಗರೇ ನನ್ನನೂ ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಿ: ರೌಡಿಶೀಟರ್‌ ಪಾನಿಪುರಿ ಮಂಜ

Ramyashree GN

ಮೈಸೂರು: ರೌಡಿ ಶೀಟರ್‌ಗಳಾದ ಫೈಟರ್ ರವಿ, ಸೈಲೆಂಟ್‌ ಸುನೀಲ್‌ ಮತ್ತು ಬೆತ್ತನಗೆರೆ ಶಂಕರ ಬಿಜೆಪಿಗೆ ಸೇರ್ಪಡೆಗೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿರುವ ಬೆನ್ನಲ್ಲೇ ಮೈಸೂರಿನ ರೌಡಿ ಶೀಟರ್‌ವೊಬ್ಬರು ತನ್ನನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಬಿಜೆಪಿ ನಾಯಕರನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಗಣೇಶನಗರ ನಿವಾಸಿಯಾಗಿರುವ ಮಂಜು ಅಲಿಯಾಸ್ ಪಾನಿ ಪುರಿ ಮಂಜ ಎಂಬಾತ ಮೇಟಗಳ್ಳಿಯಲ್ಲಿ 1 ಪ್ರಕರಣ ಹಾಗೂ ಉದಯಗಿರಿ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಉದಯಗಿರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಎಂದು ದಾಖಲಾಗಿರುವ ರೌಡಿಶೀಟರ್ ಜಿಲ್ಲಾ ನ್ಯಾಯಾಲಯದ ಎದುರು ಗಾಂಧಿ ಪ್ರತಿಮೆ ಬಳಿ ಕೇಸರಿ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದರು.

ಆದಿಚುಂಚನಗಿರಿ ಮಠದ ಮಾಜಿ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮಿ, ಸಿದ್ದಗಂಗಾ ಮಠದ ಮಾಜಿ ಪೀಠಾಧಿಪತಿ ಶಿವಕುಮಾರ ಸ್ವಾಮಿ, ಕನಕದಾಸ, ವಾಲ್ಮೀಕಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಹಿಡಿದುಕೊಂಡು ಪಾನಿ ಪುರಿ ಮಂಜ ಅವರು ತಮ್ಮ ಬೇಡಿಕೆಯನ್ನು ಬಿಜೆಪಿ ಮುಂದಿಟ್ಟಿದ್ದಾರೆ. ಬ್ಯಾನರ್‌ನಲ್ಲಿ ಬಿಜೆಪಿಗರೇ ನಾನೊಬ್ಬ ರೌಡಿ ಶೀಟರ್, ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ ಎಂದಿದ್ದಾರೆ.

ಬಿಜೆಪಿ ಕಾರ್ಯಕ್ರಮದಲ್ಲಿ ಸಚಿವರು, ಸಂಸದರಿರುವ ವೇದಿಕೆಯಲ್ಲಿಯೇ ರೌಡಿ ಶೀಟರ್‌ಗಳು ಕೂಡ ವೇದಿಕೆ ಹಂಚಿಕೊಳ್ಳುತ್ತಿದ್ದು, ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೆಸರೆರೆಚಾಟಕ್ಕೆ ಕಾರಣವಾಗಿದೆ.

SCROLL FOR NEXT