ರಾಜ್ಯ

ಶ್ರೀರಂಗಪಟ್ಟಣ: ಕೇಸರಿ ಧ್ವಜ ಹಿಡಿದು ಜಾಮಿಯಾ ಮಸೀದಿ ಪ್ರವೇಶಿಸಲು ಬಂದ ಹಿಂದೂ ಕಾರ್ಯಕರ್ತರ ತಡೆದ ಪೊಲೀಸರು!

Manjula VN

ಮೈಸೂರು: ಶ್ರೀರಂಗಪಟ್ಟಣದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಹಾಗೂ ಹನುಮ ಭಕ್ತರು ಕೇಸರಿ ಧ್ವಜ ಹಿಡಿದು ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು.

ಘಟನೆಯ ಸೂಕ್ಷ್ಮತೆ ಅರಿತ ಪೊಲೀಸರು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸುವ ಮೂಲಕ ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಿದರು.

ಹನುಮಾನ್ ಭಕ್ತರು ನಿಮಿಷಾಂಭ ದೇವಸ್ಥಾನದ ಬಳಿಯ ಹನುಮಾನ್ ದೇವಸ್ಥಾನದಿಂದ ಸಂಕೀರ್ತನಾ ಯಾತ್ರೆ ನಡೆಸಿದರು. ರಸ್ತೆಗಳಲ್ಲಿ ಸಂಚರಿಸುವ ವೇಳೆ ಅಯೋಧ್ಯೆಯಲ್ಲಿ ರಾಮಮಂದಿರ, ಶ್ರೀರಂಗಪಟ್ಟಣದಲ್ಲಿ ಹನುಮಾನ್ ಮಂದಿರ ಎಂದು ಘೋಷಣೆಗಳನ್ನು ಕೂಗಿದರು.

ಬಳಿಕ ಮಸೀದಿ ಬಳಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಜಾಮಿಯಾ ಮಸೀದಿಗೆ ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದರು, ಈ ವೇಳೆ ಪೊಲೀಸರು ಮತ್ತು ಭಕ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬಳಿಕ ಹಿಂದೂ ಕಾರ್ಯಕರ್ತರು ಮಸೀದಿ ಬಳಿ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಇದನ್ನು ತಡೆದು, ಸ್ಥಳದಿಂದ ತೆರಳುವಂತೆ ಸೂಚಿಸಿದರು.

ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಮನೆಯೊಂದರಲ್ಲಿದ್ದ ಹಸಿರು ಬಾವುಟ ತೆಗೆದು ಕೇಸರಿ ಧ್ವಜ ಹಾಕುವಲ್ಲಿ ಯಶಸ್ವಿಯಾದರು.

ವಿಶೇಷ ಪೂಜೆ ಸಲ್ಲಿಸಿದ ನಂತರ ಸಾವಿರಾರು ಭಕ್ತರು ಗಂಜಾಂನಿಂದ ಮೆರವಣಿಗೆ ಹೊರಟು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪುಷ್ಪ ಸಮರ್ಪಿಸಿದ ಕಾರಣ ಪಟ್ಟಣದ ತುಂಬೆಲ್ಲಾ ಕೇಸರಿ ಬಣ್ಣಗಳು ಕಂಡು ಬಂದಿತ್ತು.

ಮೆರವಣಿಗೆಯ ಮೇಲೆ ಕಣ್ಗಾವಲಿಡಲು ಡ್ರೋನ್‌ಗಳ ನಿಯೋಜನೆ
ಮುಂಜಾನೆಯಿಂದಲೇ ನೆರೆಯ ಮೈಸೂರು, ರಾಮನಗರ, ಮದ್ದೂರು, ಕೆಆರ್‌ಪೇಟೆ, ಪಾಂಡವಪುರ ಸೇರಿದಂತೆ ವಿವಿಧೆಡೆಯಿಂದ ಹನುಮಂತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹನುಮಾನ್ ದೇಗುಲದ ಪ್ರವೇಶ ದ್ವಾರದ ಬಳಿ ಇದ್ದ ಹನುಮಾನ್ ಮಾಲೆಯನ್ನು ತೆಗೆದು ಕಾವೇರಿ ನದಿಗೆ ಎಸೆದರು. ಭಕ್ತರಿಗೆ ಮಜ್ಜಿಗೆ, ಸಿಹಿ ತಿಂಡಿ ನೀಡುವ ಮೂಲಕ ಯಾತ್ರೆಯನ್ನು ಸ್ವಾಗತಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಉಮೇಶ್ ಅವರೊಂದಿಗೆ ಸಚಿವ ಕೆ.ಸಿ.ನಾರಾಯಣಗೌಡ ರ್ಯಾಲಿಯಲ್ಲಿ ಪಾಲ್ಗೊಂಡು ಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದರು.

ಭಾರೀ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ಸಂಜೆಯಿಂದಲೇ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಭದ್ರತಾಪಡೆಗಳಷ್ಟೇ ಅಲ್ಲದೆ, ಮೆರವಣಿಗೆ ಮತ್ತು ಕಾರ್ಯಕರ್ತರ ಚಲನವಲನದ ಮೇಲೆ ನಿಗಾ ಇಡಲು ಪೊಲೀಸರು ಡ್ರೋನ್‌ಗಳನ್ನು ಕೂಡ ನಿಯೋಜಿಸಿದ್ದಾರೆ. ಕಾರ್ಯಕರ್ತರು ಜಾಮಿಯಾ ಮಸೀದಿ ಆವರಣಕ್ಕೆ ಪ್ರವೇಶಿಸದಂತೆ ಮತ್ತು ಪೂಜೆ ಸಲ್ಲಿಸದಂತೆ ನೋಡಿಕೊಳ್ಳಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.

SCROLL FOR NEXT