ರಾಜ್ಯ

ಗೆಸ್ಟ್ ಹೌಸ್ ಪೀಠೋಪಕರಣ ಹೊತ್ತೊಯ್ದ ಆರೋಪ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ

Srinivasamurthy VN

ಮೈಸೂರು: ಮೈಸೂರಿನ ಸರ್ಕಾರಿ ಗೆಸ್ಟ್ ಹೌಸ್ ನಿಂದ  ಪೀಠೋಪಕರಣ ಹೊತ್ತೊಯ್ದಿದ್ದಾರೆ ಎಂಬ ಗಂಭೀರ ಆರೋಪವೊಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕೇಳಿಬಂದಿದ್ದು ಈ ಕುರಿತು ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಮೈಸೂರು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಾಗ ವಸತಿ ಗೃಹದಲ್ಲಿ ಉಳಿದಿದ್ದ ರೋಹಿಣಿ ಸಿಂಧೂರಿ ಅವರು ಅತಿಥಿಗೃಹದಿಂದ ಪೀಠೋಪಕರಣ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಡಳಿತ ತರಬೇತಿ ಸಂಸ್ಥೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ರವಾನಿಸಲಾಗಿದ್ದು, ಆಡಳಿತ ತರಬೇತಿ ಸಂಸ್ಥೆ ಬರೆದ ಪತ್ರ ಇದೀಗ ವೈರಲ್ ಆಗಿದೆ.

40 ದಿನ ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದ ರೋಹಿಣಿ ಸಿಂಧೂರಿ, ಅತಿಥಿಗೃಹದಿಂದ ಜಿಲ್ಲಾಧಿಕಾರಿ ನಿವಾಸಕ್ಕೆ ಹೋಗುವಾಗ ಅತಿಥಿ ಗೃಹದ 12 ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಟೆಲಿಫೋನ್ ಟೇಬಲ್, ಬೆತ್ತದ ಕುರ್ಚಿ, ಮೈಕ್ರೋವೇವ್ ಓವನ್, ಮಂಚ, ಹಾಸಿಗೆ, ಯೋಗಾ ಮ್ಯಾಟ್ ಹೀಗೆ 12 ಸಾಮಾಗ್ರಿಗಳನ್ನು ಹೊತ್ತೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಅತಿಥಿ ಗೃಹದ ಸಾಮಾಗ್ರಿಗಳನ್ನು ವಾಪಸ್ಸು ಕೊಡುವಂತೆ ಆಡಳಿತ ತರಬೇತಿ ಸಂಸ್ಥೆ ಅಧಿಕಾರಿಗಳು 2020 ರಿಂದ ಈ ವೆರೆಗೆ ಮೂರು ಪತ್ರ ಬರೆದಿದ್ದಾರಂತೆ. ಈಗ ಆಡಳಿತ ತರಬೇತಿ ಸಂಸ್ಥೆ ಅಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗೆ ಮತ್ತೊಂದು ಪತ್ರ ಬರೆದಿದ್ದು, ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದ ಸಾಮಾಗ್ರಿಗಳು ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿ ಇದ್ದಲ್ಲಿ ವಾಪಸ್ಸು ಕೊಡಿ. ಸಾಮಾಗ್ರಿಗಳು ಇಲ್ಲದಿದ್ದರೆ ಮಾಹಿತಿ ಕೊಡಿ ಅಂತಾ ಪತ್ರ ಬರೆದಿದ್ದಾರೆ. 

ರೋಹಿಣಿ ಸಿಂಧೂರಿ ಪ್ರತಿಕ್ರಿಯೆ
ಇನ್ನು ಆರೋಪಗಳಿಗೆ ರೋಹಿಣಿ ಸಿಂಧೂರಿಯವರು ಪ್ರತಿಕ್ರಿಯಿಸಿದ್ದು, ಆಡಳಿತ ತರಬೇತಿ ಸಂಸ್ಥೆಯ 12 ವಸ್ತು ಡಿಸಿ ಕಚೇರಿಯಲ್ಲಿರಬಹುದು. ಈ ಬಗ್ಗೆ ಮೈಸೂರು ಡಿಸಿ ಡಾ.ರಾಜೇಂದ್ರ ಜತೆ ಮಾತನಾಡುತ್ತೇನೆ ಎಂದು ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಅಂತೆಯೇ ಲಕ್ಕಿ ಅಲಿ ಆರೋಪದ ಬಗ್ಗೆ ನನ್ನ ಪತಿ ಸುಧೀರ್​ ರೆಡ್ಡಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಭೂ ವ್ಯಾಜ್ಯಕ್ಕೆ ನನ್ನ ಪತಿ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದ್ದಾರೆ. 

SCROLL FOR NEXT