ರಾಜ್ಯ

ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 5, 8ನೇ ತರಗತಿಗೆ ವಾರ್ಷಿಕ ಪರೀಕ್ಷೆ: ಶಿಕ್ಷಣ ಇಲಾಖೆ ಆದೇಶ

Nagaraja AB

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ, ಮೌಲ್ಯಂಕನ ನಡೆಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮಕ್ಕಳ ಕಲಿಕಾ ಕೊರತೆ ನೀಗಿಸಲು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ  ಸರ್ಕಾರ ಈ ನಿರ್ಣಯ ಕೈಗೊಂಡಿದೆ.  

ಮಕ್ಕಳ ಕಲಿಕೆಯ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ? ಇವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು  ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  

ಎಲ್ಲಾ ಶಾಲಾ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಕಲಿಕಾ- ಫಲಗಳು, ಸಾಮರ್ಥ್ಯಗಳನ್ನಾಧರಿಸಿದ ಏಕರೂಪದ ಸಾಧನಾ ಮತ್ತು ತಂತ್ರ ಬಳಸಿ ಮೌಲ್ಯಮಾಪನ ಮಾಡಿ ವಿಶ್ಲೇಶಿಸುವ ಅವಶ್ಯತೆಯಿದೆ. ಶಾಲಾ ಹಂತದಲ್ಲಿ ಪರೀಕ್ಷೆ ನಿರ್ವಹಿಸಿ, ಮೌಲ್ಯಾಂಕನ ವಿಶ್ಲೇಷಣೆ ಮಾಡಿ ಕಲಿಕಾ ಪ್ರಗತಿ ಕುಂಠಿತವಾಗಿರುವ ವಿಷಯವಾರು, ಶಾಲಾವಾರು, ಕ್ಲಸ್ಟರ್, ತಾಲೂಕು ವಾರು ವಿಶ್ಲೇಷಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಿಯಾ ಯೋಜನೆ ರೂಪಿಸಿ, ಬೋಧನಾ- ಕಲಿಕಾ ಪ್ರಕ್ರಿಯೆ ಬಲವರ್ಧನೆಗೊಳಿಸುವ ಉದ್ದೇಶ ಹೊಂದಿದ್ದು, ಪರೀಕ್ಷಾ ನಿರ್ವಹಣೆಗೆ ಅಗತ್ಯ ಪೂರ್ಣ ಸಿದ್ಧತೆ ಕೈಗೊಳ್ಳಲು ಮಾರ್ಗಸೂಚಿ ಸಿದ್ಧಪಡಿಸಿ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಪ್ರತಿ

ಪರೀಕ್ಷಾ ನೋಂದಣಿ ಶುಲ್ಕ: 2022-23ನೇ ಸಾಲಿನ ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯದೆ ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಭರಿಸಲು ಸರ್ಕಾರ ಆದೇಶಿಸಿದೆ. 

ಪರೀಕ್ಷಾ ಕೇಂದ್ರಗಳ ಸ್ಥಾಪನೆ: ಶಾಲಾವಾರು ಮಕ್ಕಳ ಸಂಖ್ಯೆಯನ್ನಾಧರಿಸಿ 5ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಮಕ್ಕಳು ಒಂದು ಕೇಂದ್ರದಲ್ಲಿ ಲಭ್ಯವಾಗುವಂತೆ, ಮಕ್ಕಳು ಕಡಿಮೆ ಇದ್ದಲ್ಲಿ 2 ಕಿ. ಮೀ ವ್ಯಾಪ್ತಿಯ ಅಗತ್ಯ ಮೂಲಭೂತ ಸೌಲಭ್ಯ ಹೊಂದಿರುವ ಕಿರಿಯ/ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸುವಂತೆ ತಿಳಿಸಲಾಗಿದೆ.

 8ನೇ ತರಗತಿ ಪರೀಕ್ಷಾ ಕೇಂದ್ರವನ್ನು ಕನಿಷ್ಠ 50 ಮಕ್ಕಳು ಇರುವಂತೆ ಆಯಾ ಹಿರಿಯ ಪ್ರಾಥಮಿಕ/ ಪ್ರೌಢಶಾಲೆಗಳಲ್ಲಿ ಸ್ಥಾಪಿಸುವುದು, ಒಂದು ವೇಳೆ ಮಕ್ಕಳ ಸಂಖ್ಯೆ ಕಡಿಮೆಯಿದ್ದಲ್ಲಿ, ಕನಿಷ್ಠ 2 ಕಿ. ಮೀ ವ್ಯಾಪ್ತಿಯ ಸಮೀಪದ ಶಾಲೆಗಳಿಗೆ ಲಗತ್ತಿಸುವಂತೆ ಸೂಚಿಸಲಾಗಿದೆ. 

SCROLL FOR NEXT