ರಾಜ್ಯ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ನಾಳೆ ಅಮಿತ್ ಶಾ ಸಂಧಾನ ಸಭೆ, ಸಿಎಂ ಬೊಮ್ಮಾಯಿ-ಶಿಂಧೆ ಭಾಗಿ

Manjula VN

ಬೆಂಗಳೂರು: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಉಲ್ಭಣಿಸಿರುವ ಕರ್ನಾಟಕ-ಮಹಾರಾಷ್ಟ್ರ ನಡುವಿನ ತ್ವೇಷಮಯ ವಾತಾವರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಹಾರ ನೀಡುವ ನಿರೀಕ್ಷೆಗಳಿವೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರು ಸಂಧಾನ ಸಭೆಯನ್ನು ಕರೆದಿದ್ದು, ಅಮಿತ್ ಶಾ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ದೆಹಲಿಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳು ಮುಖಾಮುಖಿ ಮಾತುಕತೆ ನಡೆಯಲಿದೆ.

ಅಮಿತ್ ಶಾ ಅವರು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ನವದೆಹಲಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಲ್ಲಿ ಕೇಂದ್ರ ಮಧ್ಯಪ್ರವೇಶಿಸುತ್ತಿರುವುದು ಇದೇ ಮೊದಲು. ಬೊಮ್ಮಾಯಿ ಅವರು ಬುಧವಾರ ಹುಬ್ಬಳ್ಳಿ ಮಾರ್ಗವಾಗಿ ದೆಹಲಿಗೆ ತೆರಳಲಿದ್ದು, ಸಂಜೆ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಕಳೆದ ವಾರ ಹೇಳಿಕೆ ನೀಡಿದ್ದ ಸಿಎಂ ಬೊಮ್ಮಾಯಿಯವರು, ಸೋಮವಾರ ಅಮಿತ್ ಶಾ ಅವರನ್ನು ಭೇಟಿ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ, ಸೋಮವಾರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಪ್ರಮಾಣವಚನ ಸಮಾರಂಭ ಇದ್ದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿದ್ದರು.

ಬಿಜೆಪಿ ಸಂಸದರೊಬ್ಬರು ಮಾತನಾಡಿ, ಈ ಕುರಿತು ನಮಗೆ ಯಾವುದೇ ಸಂದೇಶ ಬಂದಿಲ್ಲ. ಅನುಮತಿ ನೀಡಿದ್ದೇ ಆದರೆ, ಅಮಿತ್ ಶಾ ಅವರನ್ನು ಭೇಟಿ ಮಾಡಲು ನಾನು ಅಲ್ಲಿಯೇ ಹೋಗುತ್ತೇನೆಂದು ಹೇಳಿದ್ದಾರೆ.

ಗಡಿ ವಿವಾದ ನಮ್ಮ ರಾಜ್ಯಕ್ಕೆ ಸಂಬಂಧಿಸಿದ್ದು, ನಮ್ಮ ಆಗ್ರಹಗಳಿಗೆ ನಾವು ಬದ್ಧರಾಗಿದ್ದೇವೆಂದು ತಿಳಿಸಿದ್ದಾರೆ.

ಮಹಾರಾಷ್ಟ್ರವು ಬೆಳಗಾವಿ ನಗರ ಮತ್ತು ವಿವಿಧ ಜಿಲ್ಲೆಗಳ ನೂರಾರು ಹಳ್ಳಿಗಳ ಮೇಲೆ ಹಕ್ಕು ಸಾಧಿಸುತ್ತಿದೆ, ಆದರೆ ಮಹಾರಾಷ್ಟ್ರದ ಅನೇಕ ಹಳ್ಳಿಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸುತ್ತವೆ. ಗಡಿ ವಿವಾದ ಇದೀಗ ಸುಪ್ರೀಂಕೋರ್ಟ್‌ ಅಂಗಳದಲ್ಲಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸಂಸದರು ಇತ್ತೀಚೆಗೆ ಷಾ ಅವರನ್ನು ಭೇಟಿ ಮಾಡಿ ಬೊಮ್ಮಾಯಿ ಮತ್ತು ಇತರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಇತರರು ಕರ್ನಾಟಕದ ಇತರ ಸಂಸದರೊಂದಿಗೆ ಶಾ ಅವರನ್ನು ಭೇಟಿ ಮಾಡಲು ಸಮಯ ಪಡೆದುಕೊಳ್ಳಲು ಯತ್ನಿಸಿದ್ದರು, ಆದರೆ, ಅಮಿತ್ ಶಾ ಅವರು ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

SCROLL FOR NEXT