ರಾಜ್ಯ

ದಲಿತರಿಗೆ ಒಳಮೀಸಲಾತಿಗೆ ಜಸ್ಟೀಸ್ ಸದಾಶಿವ ಆಯೋಗ ವರದಿ ಶಿಫಾರಸು: ಸಂಪುಟ ಉಪಸಮಿತಿ ರಚನೆ

Sumana Upadhyaya

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವ ಕುರಿತು ಅಧ್ಯಯನ ಮಾಡಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ. ಇದಕ್ಕಾಗಿ ಸಂಪುಟ ಉಪಸಮಿತಿಯನ್ನು ರಚಿಸಿ ಇಂದು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಪರಿಶಿಷ್ಟ ಜಾತಿಗಳಿಗೆ ಶೇಕಡಾ 15ರಷ್ಟು ಒಳ ಮೀಸಲಾತಿ ನೀಡಬೇಕೆಂದು ಜಸ್ಟೀಸ್ ಸದಾಶಿವ ಆಯೋಗ ಶಿಫಾರಸು ಮಾಡಿದ್ದು ಇದರ ಸಾಧ್ಯಾಸಾಧ್ಯತೆಗಳನ್ನು ಚರ್ಚಿಸಲು ಸಚಿವ ಸಂಪುಟ ಉಪಸಮಿತಿಯನ್ನು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಉಪಸಮಿತಿಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಎಸ್ ಅಂಗಾರ, ಪ್ರಭು ಚವ್ಹಾಣ್ ಮತ್ತು ಡಾ ಕೆ ಸುಧಾಕರ್ ಅವರು ಸದಸ್ಯರಾಗಿದ್ದಾರೆ. 

ಸದಾಶಿವ ಆಯೋಕದ ವರದಿ ಜಾರಿಗೆ ಆಗ್ರಹಿಸಿ ಮೊನ್ನೆ ಭಾನುವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಸದಾಶಿವ ಆಯೋಗದ ವರದಿ ಜಾರಿಗಾಗಿ ಆಗ್ರಹಿಸುತ್ತಿದ್ದ ಕಾರ್ಯಕರ್ತರನ್ನು ಬಿಜೆಪಿ ಸರ್ಕಾರ ಬಂಧಿಸಿರುವುದನ್ನು ಖಂಡಿಸುತ್ತೇವೆ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದರು.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡುವುದಾಗಿ ಕೂಡ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇದೀಗ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವುದರಿಂದ ಬಿಜೆಪಿ ಸರ್ಕಾರ ತುರ್ತು ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT