ರಾಜ್ಯ

ವಿವಿ ಪುರಂ ಫುಡ್ ಸ್ಟ್ರೀಟ್'ಗೆ ಸ್ಮಾರ್ಟ್ ಟಚ್: ಮರುನಾಮಕರಣಕ್ಕೆ ಸಾರ್ವಜನಿಕರಿಂದ ಸಲಹೆ ಕೇಳಿದ ಬಿಬಿಎಂಪಿ

Manjula VN

ಬೆಂಗಳೂರು: ರೂ.6 ಕೋಟಿ ವೆಚ್ಚದಲ್ಲಿ ವಿವಿ ಪುರದ ಫುಡ್ ಸ್ಟ್ರೀಟ್ ಅಭಿವೃದ್ಧಿಪಡಿಸಲಾಗುತ್ತಿದ್ದು, ನಾಲ್ಕು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲು ಬಿಬಿಎಂಪಿ ಮುಂದಾಗಿದೆ.

ಮಂಗಳವಾರ ವಿವಿ ಪುರ ಫುಡ್ ಸ್ಟ್ರೀಟ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ಉದಯ ಗರುಡಾಚಾರ್ ಅವರು ಶಂಕು ಸ್ಥಾಪನೆ ನೆರವರಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಫುಡ್ ಸ್ಟ್ರೀಟ್'ಗೆ ಮರುನಾಮಕರಣ ಮಾಡಲಾಗುತ್ತದೆ ಎಂದು ಹೇಳಿದರು. ಅಲ್ಲದೆ, ಮರುನಾಮಕರಣಕ್ಕೆ ಸಾರ್ವಜನಿಕರು ಸಲಹೆ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗರುಡಾಚಾರ್ ಅವರು, ಫೆಬ್ರವರಿ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. “ಎರಡು ವರ್ಷಗಳ ಹಿಂದೆ, ನಾನು ಈ ವಾರ್ಡ್‌ನ ನನ್ನ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದೆ. ಈ ವೇಳೆ ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ಸಂಬಂಧಿಸಿದ ಕೆಲವು ಅಭಿವೃದ್ಧಿ ಕೆಲಸಗಳ ಕೈಗೊಳ್ಳಲು ನಿರ್ಧರಿಸಿದ್ದೆ. ಈ ವಿಚಾರವನ್ನು ಬಿಬಿಎಂಪಿ ಗಮನಕ್ಕೂ ತಂದಿದ್ದೆ. ಇದೀಗ ಸರಕಾರ ಅನುದಾನವನ್ನೂ ನೀಡಿದೆ ಎಂದು ಹೇಳಿದರು.

ಬಿಬಿಎಂಪಿ ಹಣಕಾಸು ಆಯುಕ್ತ ಜಯರಾಮ ರಾಯಪುರ ಮಾತನಾಡಿ, ಈ ಯೋಜನೆ ಪೂರ್ಣಗೊಂಡರೆ ನಗರದ ಇತರ ಎಲ್ಲ ಫುಡ್ ಸ್ಟ್ರೀಟ್ ಗಳಿಗೂ ಮಾದರಿಯಾಗಲಿದೆ ಎಂದು ತಿಳಿಸಿದರು.

ಅಭಿವೃದ್ಧಿ ಪೂರ್ಣಗೊಂಡ ನಂತರ ಬಿಬಿಎಂಪಿ ಇಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳ ದರವನ್ನು ನಿಗದಿಪಡಿಸುತ್ತದೆಯೇ ಎಂದು ಪ್ರಶ್ನೆಗೆ ಉತ್ತರಿಸಿ, ಅದು ವ್ಯಾಪಾರಿಗಳಿಗೆ ಬಿಟ್ಟದ್ದು ಎಂದರು.

SCROLL FOR NEXT