ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಸಂಘರ್ಷದ ಬೆನ್ನಲ್ಲೇ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಹಾರಾಷ್ಟ್ರ ಜನಪ್ರತಿನಿಧಿಗಳು ಮಾಡುತ್ತಿದ್ದು, ಮಹಾರಾಷ್ಟ್ರ ಗಡಿ ಸಲಹಾಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲಮಾನೆ ಬೆಳಗಾವಿಗೆ ಬರುವುದಾಗಿ ಹೇಳಿ ಪತ್ರ ರವಾನಿಸಿದ್ದಾರೆ.
ನಾಳೆ ವ್ಯಾಕ್ಸಿನ್ ಡಿಪೋದಲ್ಲಿ ಆಯೋಜಿಸಿರುವ ಮಹಾಮೇಳದಲ್ಲಿ ಮಹಾರಾಷ್ಟ್ರ ಗಡಿ ಸಲಹಾಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲಮಾನೆ ಬೆಳಗಾವಿಗೆ ಬರುವುದಾಗಿ ಪತ್ರ ಬರೆದು ತಮಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಅದರ ಜತೆ ಪ್ರವಾಸದ ಪಟ್ಟಿಯನ್ನು ಲಗ್ಗತ್ತಿಸಿದ್ದಾರೆ. ವಿಧಾನ ಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ಈ ಮಹಾಮೇಳ ನಡೆಸುತ್ತಿದೆ.
ಇದನ್ನೂ ಓದಿ: ಬೆಳಗಾವಿ ಗಡಿ ವಿವಾದದಲ್ಲಿ ಎಂಇಎಸ್ ಪುಂಡಾಟಿಕೆಯನ್ನು ನಿಯಂತ್ರಿಸುವುದು ಹೇಗೆ ಎಂದು ನಮಗೆ ಗೊತ್ತಿದೆ: ಸಿಎಂ ಬೊಮ್ಮಾಯಿ
ನಾಳೆ ಬೆಳಗಾವಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲಮಾನೆ ಭೇಟಿ ಕುರಿತಂತೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಮಾನೆಯವರ ಭೇಟಿಗೆ ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ನಗರದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಮಗ್ರ ವರದಿ ನೀಡುವಂತೆಯೂ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಮಾನೆಯವರಿಗೆ ಬೆಳಗಾವಿ ಭೇಟಿಗೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ಪ್ರವೇಶ ನಿರ್ಬಂಧ ಆದೇಶ ಹೊರಡಿಸಿದ ಡಿಸಿ ನಿತೇಶ್ ಪಾಟೀಲ್!
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಪ್ರದೇಶಕ್ಕೆ ಭೇಟಿ ನೀಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಧೈರ್ಯಶೀಲ್ ಅವರು ಬೆಳಗ್ಗೆ 10 ಗಂಟೆ ಸುಮಾರಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕುಗುನೊಳ್ಳಿ ಚೆಕ್ ಪೋಸ್ಟ್‌ಗೆ ಬರುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ಸೂಚಿಸಿವೆ.
ಮಹಾಮೇಳಕ್ಕೆ ಎಂಇಎಸ್ ಸಜ್ಜು
ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಹೊತ್ತಲ್ಲೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟಿಕೆ ಮೆರೆದಿದ್ದು, ಮಹಾಮೇಳ ನಡೆಸಲು ಸಜ್ಜಾಗಿದೆ. ಪ್ರತಿ ಬಾರಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅಧಿವೇಶನ ನಡೆದಾಗಲೆಲ್ಲ ಎಂಇಎಸ್ ಒಂದಲ್ಲ ಒಂದು ರೀತಿಂiiಲ್ಲಿ ಕ್ಯಾತೆ ತೆಗೆಯುತ್ತಿದ್ದು, ಈ ಬಾರಿಯೂ ಮಹಾಮೇಳ ನಡೆಸಲು ತಯಾರಿ ನಡೆದಿದೆ.ಇತ್ತೀಚೆಗೆ ಉಭಯ ರಾಜ್ಯಗಳ ನಡುವಣ ಗಡಿ ವಿವಾದ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಗಡಿ ವಿವಾದ ಕುರಿತಂತೆ ಯಥಾಶಕ್ತಿ ಕಾಯ್ದುಕೊಂಡು ಕರ್ನಾಟಕ-ಮಹಾರಾಷ್ಟ್ರ ನಡುವೆ ಸಚಿವರ ತಂಡ ರಚಿಸುವಂತೆ ನಿರ್ಧಾರ ಕೈಗೊಳ್ಳಲಾಗಿತ್ತು.